ನಗರದಲ್ಲಿ ಭಾನುವಾರ ರಾತ್ರಿ ಗಾಳಿ ಸಹಿತ ಸುರಿದ ಮಳೆಗೆ ಹಲವೆಡೆ ಮರದ ರೆಂಬೆ-ಕೊಂಬೆಗಳು ಮುರಿದು ಸೃಷ್ಟಿಯಾಗಿದ್ದ ಅವಾಂತರವನ್ನು ಪಾಲಿಕೆ ಅಭಯ ತಂಡ ಕಾರ್ಯಾಚರಣೆ ನಡೆಸಿ ಸರಿಪಡಿಸಿದೆ.
ಸೋಮವಾರ ಸಂಜೆವರೆಗೂ ಅಭಯ 3 ತಂಡ ಹಾಗೂ ಪಾಲಿಕೆ ತೋಟಗಾರಿಕೆ ವಿಭಾಗದ 3 ತಂಡ ಸೇರಿ ಒಟ್ಟು 24 ಮಂದಿ ಒಟ್ಟು 6 ವಾಹನಗಳಲ್ಲಿ ತೆರಳಿ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸಂಜೆಯ ನಂತರ ಹಾಗೂ ರಾತ್ರಿ ವೇಳೆ ಬಿದ್ದ ಗಾಳಿ ಸಹಿತ ಮಳೆಗೆ ಹಲವೆಡೆ ಮರದ ರೆಂಬೆ-ಕೊಂಬೆಗಳು ಮುರಿದು ಬಿದ್ದು ಅವಾಂತರ ಸೃಷ್ಟಿಯಾಗಿತ್ತು. ಈ ಸಂಬಂಧ ಪಾಲಿಕೆ ಕಂಟ್ರೋಲ್ ರೂಂಗೆ 20ಕ್ಕೂ ಹೆಚ್ಚು ದೂರುಗಳು ಬಂದಿವೆ. ಸೋಮವಾರ ಸಂಜೆಯವರೆಗೆ ಪಾಲಿಕೆ ಅಭಯ ತಂಡದಿಂದ ತೆರವು ಕಾರ್ಯ ನಡೆಯಿತು.
ಕುವೆಂಪುನಗರ ಡಿಪೋ ರಸ್ತೆ ಬಳಿ ಮರದ ಕೊಂಬೆಯೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂ ಆಗಿದೆ. ಜೆ.ಪಿ.ನಗರ 20ನೇ ಮುಖ್ಯ ರಸ್ತೆಯಲ್ಲಿ ಒಟ್ಟಿಗೆ ಎರಡು ಮರಗಳು ಉದ್ಯಾನದ ಕಡೆಗೆ ಉರುಳಿ ಬಿದ್ದಿವೆ. ಜೆ.ಪಿ.ನಗರದ ಈಜುಕೊಳದ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಧರಾಶಾಹಿಯಾಗಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಶ್ರೀರಾಂಪುರ ಬೆಮೆಲ್ ನಗರದ 15ನೇ ಮುಖ್ಯ ರಸ್ತೆಯಲ್ಲಿಯೂ ಮರವೊಂದು ರಸ್ತೆಯ ಮೇಲೆ ಬಿದ್ದಿದೆ.
ಗನ್‌ಹೌಸ್ ಬಳಿ, ಶ್ರೀರಾಂಪುರ, ಹುಡ್ಕೋ ಬನ್ನಿಮಂಟಪ, ಉದಯಗಿರಿ, ಸಿದ್ಧಾರ್ಥ ಲೇಔಟ್, ಶಾಂತಿನಗರ, ಬೀಡಿ ಕಾಲನಿ, ಜಯನಗರದ ಕೋರ್ಟ್ ರಸ್ತೆಯಲ್ಲಿ ಗಾಳಿಯಿಂದ ಕೂಡಿದ ಮಳೆಗೆ ಮರದ ರೆಂಬೆ, ಕೊಂಬೆಗಳು ಮುರಿದು ಬಿದ್ದಿವೆ.