| ಮನೋಹರ ಜೋಶಿ
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯನ್ನು ಉತ್ಥಾನ ದ್ವಾದಶೀ ಎಂದು ಕರೆಯುತ್ತಾರೆ. ಇಂದು ಚಾತುರ್ವಸ್ಯ ವ್ರತ ಸಂಪನ್ನಗೊಳ್ಳುವ ದಿನ. ಈ ದಿನ ಶ್ರೀನಾರಾಯಣನು ಯೋಗನಿದ್ರೆಯಿಂದ ಎಚ್ಚರಗೊಳ್ಳುವ ಪವಿತ್ರದಿನ. ಆಷಾಢಮಾಸದ ಶಯನೀ ಏಕಾದಶಿಯಂದು ಯೋಗ ನಿದ್ರೆಗೆ ಜಾರಿ ಕಾರ್ತಿಕಮಾಸದ ಶುಕ್ಲಪಕ್ಷದ ದ್ವಾದಶೀ ದಿನದಂದು ಏಳುವನು. ಅದಕ್ಕೆಂದೆ ಇದನ್ನು ಉತ್ಥಾನ ದ್ವಾದಶಿಯೆಂದು, ಪ್ರಬೋದೋತ್ಸವೆಂದು ಕರೆಯುತ್ತಾರೆ. ಬೆಳಗ್ಗೆ ಪ್ರಬೋದೋತ್ಸವ ಮಾಡಿ, ಸಾಯಂಕಾಲದಲ್ಲಿ ತುಳಸಿ ವಿವಾಹ ಮಹೋತ್ಸವ ಆಚರಿಸಲಾಗುತ್ತದೆ.
ತುಳಸಿ ಮಹಿಮೆ: ತುಳಸಿ ನೋಡಿದರೆ ಪಾಪ ಕಳೆಯುವಳು. ಸ್ಪರ್ಶಿಸಿದರೆ ಪಾವನ ಮಾಡುವಳು. ಪೂಜಿಸಿದರೆ ಸರ್ವಸ್ವವನ್ನೂ ನೀಡುವವಳು. ಶ್ರೀರಾಮಚಂದ್ರಪ್ರಭು ವಶಿಷ್ಠ ಮಹಾ ಮುನಿಗಳ ಅಣತಿಯಂತೆ ಸರಯೂ ನದಿಯ ದಡದಲ್ಲಿ ತುಳಸಿಗಿಡ ಬೆಳೆಸಿ ಪೂಜಿಸಿದನು. ಇದರ ಪ್ರಭಾವದಿಂದ ರಾವಣನನ್ನು ಗೆದ್ದು ಸೀತಾದೇವಿ ಜೊತೆ ಅಯೋಧ್ಯೆಗೆ ಮರಳಿದ. ಹನುಮಂತನು ತುಳಸಿಧಾರಣೆ ಮಾಡಿಯೇ ಸಾಗರ ದಾಟಿ ಸೀತಾಮಾತೆಯನ್ನು ಕಂಡನು. ಶ್ರೀಕೃಷ್ಣನು ಕಂಸನ ಸಂಹಾರಕ್ಕೂ ಮೊದಲು ತುಳಸಿ ಮಾತೆಯನ್ನು ಪೂಜಿಸಿ ತುಳಸಿಯ ಮಹಿಮೆಯನ್ನು ಲೋಕಕ್ಕೆ ತಿಳಿಸಿದನು. ಸತ್ಯಭಾಮೆ ಶ್ರೀಕೃಷ್ಣಗೆ ತುಲಾಭಾರ ಮಾಡಿ ಸಮರ್ಪಿಸುವಾಗ ಅಪಾರ ಆಭರಣ-ಸಂಪತ್ತು ಸಾಲದಿದ್ದಾಗ ರುಕ್ಮೀಣಿ ಒಂದು ತುಳಸಿ ದಳ ಸಮರ್ಪಿಸಿದಾಗ ತುಲಾಭಾರ ಸರಿಯಾಗಿ ತೂಗಿತು. ತುಳಸಿಯಲ್ಲಿ ಜಾಂಬವತಿಯ ಸನ್ನಿಧಾನವಿದೆ. ತುಳಸಿ ಲಕ್ಷ್ಮೀದೇವಿಯ ರೂಪವೂ ಹೌದು. ಕಾರ್ತಿಕ ಮಾಸದದಲ್ಲಿ ತುಳಸಿ ಪೂಜೆ, ದೀಪಾರಾಧನೆಗಳಿಂದ ವಿಶೇಷ ಫಲ ಪ್ರಾಪ್ತಿ ಎಂದು ಹೇಳಲಾಗಿದೆ.
ಭಗವಂತನಿಗೆ ಪ್ರಿಯವಾದ ಪತ್ರ ತುಳಸಿ. ಯಾವುದೇ ಹೂ-ಪತ್ರಗಳು ತುಳಸಿಗೆ ಸರಿಸಮಾನವಾಗಲಾರದು. ಸಹಸ್ರ ಪುಷ್ಪಗಳಿಂದ ಅರ್ಚಿಸಿದರೂ ಒಂದು ತುಳಸಿ ದಳದಿಂದ ಭಗವಂತ ಸಂತುಷ್ಟಗೊಳ್ಳುತ್ತಾನೆ ಎನ್ನುತ್ತವೆ ಸ್ಮೃತಿ-ಪುರಾಣಗಳು. ತುಳಸಿ ದಳಗಳಿಲ್ಲದೆ ಯಾವುದೇ ಕರ್ಮ ಪೂರ್ಣವಾಗುವುದಿಲ್ಲ. ತುಳಸಿಯಿಂದಲೇ ಪಾವಿತ್ರ್ಯ ಬರುವುದು. ತುಳಸಿಯಲ್ಲಿ ಸಕಲದೇವತೆಗಳ ಹಾಗೂ ಸಕಲ ನದಿ-ಸಮುದ್ರಗಳ ಸನ್ನಿಧಾನ ತುಂಬಿದೆ. ತುಳಸಿಗಿಡದ ಎಲೆ, ಮಂಜರೀ, ಕಾಷ್ಠ, ಮೃತ್ತಿ್ತೆ ಎಲ್ಲವೂ ಅತಿಪವಿತ್ರ. ಎಲೆ, ಬೇರು, ಬೀಜ ಹಾಗೂ ಸಂಪೂರ್ಣಗಿಡವೇ ಉಪಯುಕ್ತವಾಗಿದೆ. ತುಳಸಿ ಸುತ್ತಮುತ್ತಲಿನ ಗಾಳಿಯನ್ನು ಪರಿಶುದ್ಧಗೊಳಿಸುವ ಶಕ್ತಿಹೊಂದಿದೆ.
ತುಳಸಿ ಮದುವೆ: ‘ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ ಬಲ್ಲಿದ ಶ್ರೀವಾಸುದೇವನಿಗೆ’¬ಎಂದು ಶ್ರೀಪುರಂದರದಾಸರು ಕೀರ್ತನೆಯಲ್ಲಿ ಸ್ಮರಿಸಿದಂತೆ, ಉತ್ಥಾನ ದ್ವಾದಶಿಯಂದು ವಿಷ್ಣುವಿನ ಪೂಜೆ ಹಾಗೂ ವಿಷ್ಣುವಿನೊಡನೆ ಧಾತ್ರೀ (ನೆಲ್ಲಿಗಿಡ) ಸಹಿತವಾದ ತುಳಸಿ ಗಿಡ ನೆಟ್ಟು ಪೂಜಿಸುವರು. ಕಾರ್ತಿಕ ಮಾಸದಲ್ಲಿ ನೆಲ್ಲಿಗಿಡದಲ್ಲಿ ವಿಷ್ಣುವಿನ ಸನ್ನಿಧಾನ ಇರುವುದರಿಂದ ನೆಲ್ಲಿಗಿಡದೊಂದಿಗೆ ತುಳಸಿ ವಿವಾಹ ಮಹೋತ್ಸವ ನಡೆಯುತ್ತದೆ. ನೆಲ್ಲಿಕಾಯಿಯ ಟೊಂಗೆ ತುಳಸಿ ಬೃಂದಾವನದಲ್ಲಿ ನೆಟ್ಟು, ನೆಲ್ಲೆ ಕಾಯಿಯ ಮೇಲೆ ದೀಪ ಬೆಳಗಿಸಿ ಸಂಜೆ ಆರತಿ ಬೆಳಗುವುದು ಈ ದಿನದ ವಿಶೇಷ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಿ ಸಂಜೆ ಬಂಧು -ಬಾಂಧವರಿಂದ ಕೂಡಿಕೊಂಡು ಪುರೋಹಿತರ ಸಮ್ಮುಖದಲ್ಲಿ ಸಂಭ್ರಮದ ಮದುವೆ ಮಾಡುತ್ತಾರೆ. ತುಳಸಿರೂಪದಲ್ಲಿರುವ ರುಕ್ಮಿಣಿದೇವಿ ಕಾರ್ತಿಕ ಶುದ್ಧ ದ್ವಾದಶಿಯಂದು ಶ್ರೀಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಪುರಾಣದ ಪ್ರಕಾರ ದೇವತೆಗಳೂ ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ತೇಲಿ ಬಂದಾಗ ಅದನ್ನು ಸ್ವೀಕರಿಸಿದ ವಿಷ್ಣುವಿನ ಕಣ್ಣುಗಳಿಂದ ಆನಂದಬಾಷ್ಪಗಳು ಅಮೃತ ಕಲಶದಲ್ಲಿ ಬಿದ್ದು ಅದರಿಂದ ಸಣ್ಣ ಸಸ್ಯ ಹುಟ್ಟಿತು. ಆ ಸಸ್ಯಕ್ಕೆ ತುಲನೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟನು. ಲಕ್ಷ್ಮೀಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು.
(ಲೇಖಕರು ಹವ್ಯಾಸಿ ಬರಹಗಾರರು)