ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಮತ್ತು ಬೇಹುಗಾರಿಕೆ ಸಂಸ್ಥೆ ಐಎಸ್ಐನ ಬತ್ತಳಿಕೆಯಲ್ಲಿ ಚೀನಾ ನಿರ್ವಿುತ ದೊಡ್ಡ ಡ್ರೋನ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪಂಜಾಬ್ ಹಾಗೂ ಜಮ್ಮು- ಕಾಶ್ಮೀರದೊಳಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಸಾಮರ್ಥ್ಯ ಹೆಚ್ಚಿಸಲು ಚೀನಿ ಡ್ರೋನ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಕಳ್ಳಸಾಗಣೆ ಮಾಡುತ್ತಿರುವ ಉಗ್ರ ಸಂಘಟನೆಗಳು ಹಾಗೂ ಐಎಸ್ಐ ಈಗ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರ ಸಾಗಿಸುವ ಸಾಮರ್ಥ್ಯ ಹೊಂದಿರುವ ಮೇಲ್ದರ್ಜೆಗೇರಿಸಿದ ಡ್ರೋನ್ಗಳನ್ನು ಚೀನಾದಿಂದ ಖರೀದಿಸುತ್ತಿದೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಪೂರೈಸಲೆಂದು ಪಂಜಾಬ್ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಡ್ರೋನ್ ಮೂಲಕ ಇಳಿಸಲಾಗುತ್ತಿದೆ. ಎಂದು ಹೇಳಿವೆ.
ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಎತ್ತರದ ಗುಡ್ಡಗಾಡು ಪ್ರದೇಶಗಳು ಹಿಮಾವೃತವಾಗಿರುವುದರಿಂದ ಜಿಹಾದಿಗಳು ಜಮ್ಮು-ಕಾಶ್ಮೀರದೊಳಗೆ ನುಸುಳಲು ಕಷ್ಟವಾಗುತ್ತಿದೆ. ಹೀಗಾಗಿ ಸಾಮರ್ಥ್ಯ ಹೆಚ್ಚಳ ಅವರಿಗೆ ಅನಿವಾರ್ಯವಾಗಿದೆ ಎಂದು ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ-ಪಾಕ್ ಮಿಲಿಟರಿ ಒಪ್ಪಂದ: ಭಾರತ ಮತ್ತು ಚೀನಾ ನಡುವೆ ಗಡಿ ಉದ್ವಿಗ್ನತೆ ಮುಂದುವರಿದಿರುವುದುರ ನಡುವೆಯೇ ಚೀನಾ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿವೆ. ಈಗಿರುವ ಮಿಲಿಟರಿ ಬಾಂಧವ್ಯವನ್ನು ಬಲಪಡಿಸುವುದು ಅದರ ಉದ್ದೇಶವಾಗಿದ್ದು ಭಾರತಕ್ಕೆ ಕಳವಳ ಮೂಡಿಸುವಂತಿದೆ. ಚೀನಾದ ರಕ್ಷಣಾ ಸಚಿವ ವೀ ಫೆಂಗೆ ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನ ಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾಗ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಲಡಾಖ್ನಲ್ಲಿ ಚೀನಿ ಸೈನಿಕರ ಸರದಿ ಕಾವಲು: ಚೀನಾದ ಸೈನಿಕರಿಗೆ ಪೂರ್ವ ಲಡಾಖ್ ಗಡಿಯಲ್ಲಿ ತೀವ್ರ ಚಳಿಯನ್ನು ತಾಳಿಕೊಳ್ಳುವುದು ಕಷ್ಟವಾಗಿದೆ. ಹೀಗಾಗಿ ಅದು ಮುಂಚೂಣಿ ಪ್ರದೇಶಗಳಲ್ಲಿ ಪ್ರತಿ ದಿನವೂ ಸೈನಿಕರನ್ನು ಸರದಿ ಮೇಲೆ ಬದಲಾಯಿಸುತ್ತಿದೆ. ಆದರೆ ಭಾರತೀಯ ಯೋಧರು ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ದೀರ್ಘ ಕಾಲದಿಂದ ಅಲ್ಲಿ ಬೀಡು ಬಿಟ್ಟಿದ್ದಾರೆ. ಲಡಾಖ್ ವಲಯದಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸಿರುವುದರಿಂದ ಅಲ್ಲಿನ ಹವಾಮಾನ ಎದುರಿಸುವ ವಿಚಾರದಲ್ಲಿ ಭಾರತೀಯ ಸೈನಿಕರು ಪಳಗಿದ್ದಾರೆ.
ಭಯೋತ್ಪಾದಕರನ್ನು ಭಾರತದೊಳಗೆ ಕಳಿಸಲು ಬಳಸಿದ್ದ ಸುರಂಗದ ಮೂಲ ಪತ್ತೆಗೆ ಹೊರಟ ಭಾರತೀಯ ಭದ್ರತಾ ಪಡೆ ಸಿಬ್ಬಂದಿ ಗಡಿಯಾಚೆಗೆ 200 ಮೀಟರ್ಗಳಷ್ಟು ಹೋಗಿತ್ತು ಎಂದು ಸೇನಾ ಮೂಲಗಳು ತಿಳಿಸಿವೆ. ಈ ಸುರಂಗ ಮೂಲಕ ನುಸುಳಿದ್ದ ಜೆಇಎಂನ ನಾಲ್ವರು ಭಯೋತ್ಪಾದಕರನ್ನು ಕಾಶ್ಮೀರದ ನಗರೋಟಾದಲ್ಲಿ ನ.19ರಂದು ನಡೆದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಯಿತು.