ನ್ಯೂಸ್

ಪರಿಹಾರ ಹೆಚ್ಚಿಸುವಂತೆ ಶೀಘ್ರ ಮನವಿ - ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಅಥಣಿ ಗ್ರಾಮೀಣ: ಕೃಷ್ಣಾ ನದಿ ಪ್ರವಾಹದಿಂದ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ಬೆಳೆಗಳು, ಶಾಲಾ ಕೊಠಡಿ ಹಾಗೂ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯಲ್ಲಮ್ಮದೇವಿ ಜಾತ್ರೆ ಹಾಗೂ ಶ್ರೀ ಅಪ್ಪಯ್ಯಸ್ವಾಮೀಜಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಹಾನಿ ಕುರಿತು ರೈತರಿಗೆ ಪ್ರತಿ ಹೆಕ್ಟರ್‌ಗೆ 11 ಸಾವಿರ ರೂ. ಪರಿಹಾರ ನೀಡಲಾಗಿದೆ. ಪರಿಹಾರ ಹೆಚ್ಚಿಸುವಂತೆ ಕೇಂದ್ರ ಸರ್ಕಾರದ ಬಳಿ ಕೇಳುತ್ತೇನೆ.

ನೆನೆಗುದಿಗೆ ಬಿದ್ದಿರುವ ವಿಜಯಪುರ ,ಅಥಣಿ, ಶೇಡಬಾಳ ಮಾರ್ಗದ ರೈಲ್ವೆ ಯೋಜನೆ ಪೂರ್ಣಗೊಳಿಸುವಂತೆ ರೈಲ್ವೆ ಸಚಿವ ವೈಷ್ಣವ ಅವರನ್ನು ಭೇಟಿ ಮಾಡಿ ಕೇಳಿಕೊಳ್ಳುತ್ತೇನೆ.

ಬಿಜೆಪಿ ಮುಡಾ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ರಾಜ್ಯಪಾಲರನ್ನು ಕೈಗೊಂಬೆಯಾಗಿ ಬಿಜೆಪಿ ಬಳಸಿಕೊಂಡಿದೆ ಎಂದು ಆರೋಪಿಸಿದರು. ಉದ್ಯಮಿ ಸದಾಶಿವ ಬುಟಾಳಿ ಮಾತನಾಡಿ, ಜಾತ್ರೆಗಳು ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ ಎಂದರು.

ಮುಖಂಡ ಅನಿಲ ಸುಣಡೊಳ್ಳಿ, ವಕೀಲ ಸುನೀಲ ಸಂಕ, ಬಸವರಾಜ ಯಡೂರ, ಗ್ರಾಪಂ ಅಧ್ಯಕ್ಷ ಅಣ್ಣಾಸಾಬ ಯಂಡೊಳ್ಳಿ, ಹುಸೇನ್ ಮಿರಾಗೋಳ, ಮಲ್ಲಪ್ಪ ಯಡೂರ, ಈಶ್ವರ ಚಿಪ್ಪಾಡಿ, ಜಕ್ಕಪ್ಪ ಪಾಟೀಲ, ಶಾಂತಪ್ಪ ಸಂಕೋನಟ್ಟಿ, ಲಕ್ಷ್ಮಣ ಯಡೂರ ಇತರರು ಇದ್ದರು.