ನ್ಯೂಸ್

ಪರಿಹಾರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶ

ಸರಗೂರು: ತಾಲೂಕಿನಲ್ಲಿ ನಾಲ್ಕೈದು ತಿಂಗಳಿನಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಯಾಗಿದ್ದ ಮನೆಗಳ ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಸುಮಾರು 600 ಫಲಾನುಭವಿಗಳ ಹೆಸರನ್ನು ಏಕಾಏಕಿ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸರಗೂರು ನೆರೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಅ.10ರ ಒಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿರಂತರ ಧರಣಿ ಸಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಂತ್ರಸ್ತರು ಎಚ್ಚರಿಕೆ ನೀಡಿದರು. ಪಟ್ಟಣದ ತಾಲೂಕು ಕಛೇರಿಯ ಮುಂಭಾಗ ಜಮಾವಣೆಗೊಂಡಿದ್ದ ಸುಮಾರು 300ಕ್ಕೂ ಅಧಿಕ ನೆರೆ ಸಂತ್ರಸ್ತ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಅ.10ರಿಂದ ನಿರಂತರ ಧರಣಿ ನಡೆಸಲು ತೀರ್ಮಾನಿಸಲಾಯಿತು.


ಧಾರಾಕಾರ ಮಳೆಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಮನೆಗಳು ಹಾನಿಗೊಳಗಾಗಿದ್ದವು. ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು ಪರಿಶೀಲನೆ ನಡೆಸಿ ಮನೆಯ ಪರಿಹಾರಕ್ಕಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ತಾಲೂಕು ಆಡಳಿತದ ಮೂಲಕ ಪರಿಹಾರಕ್ಕಾಗಿ ಫಲಾನುಭವಿಗಳ ಹೆಸರನ್ನು ಸೇರಿಸಲಾಗಿತ್ತು. ಆದರೆ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ವರದಿಯಲ್ಲಿ ಲೋಪವಿದೆ ಎಂದು ದೋಷಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಮರು ಪರಿಶೀಲನೆ ನಡೆಸಲಾಗಿತ್ತು. ಆದರೆ ತನಿಖಾ ತಂಡ ಮತ್ತೇ 600 ಸಂತ್ರಸ್ತರ ಹೆಸರನ್ನು ಪಟ್ಟಿಯಿಂದ ಏಕಾಏಕಿ ಕೈ ಬಿಟ್ಟಿದ್ದು, ಇದರಿಂದಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ಕೈತಪ್ಪುವಂತಾಗಿದೆ. ಮನೆ ಕಳೆದುಕೊಂಡ ನಿಜವಾದ ನಾವು ಬೀದಿಗೆ ಬಿದ್ದಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅಮ್ ಆದ್ಮಿ ಪಕ್ಷದ ತಾಲೂಕು ಉಸ್ತುವಾರಿ ಗ್ರಾಮೀಣ ಮಹೇಶ್ ಮಾತನಾಡಿ, 600 ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು ಜಿಲ್ಲಾಧಿಕಾರಿ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಿದೆ. ಅಧಿಕಾರಿಗಳು ತಪ್ಪು ವರದಿ ನೀಡಿದ್ದಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೇ ಹೊರತು ಮನೆಕಳೆದುಕೊಂಡ ನೆರೆಸಂತ್ರಸ್ತರ ವಿರುದ್ಧವಲ್ಲ. ಆದ್ದರಿಂದ ಕೂಡಲೇ ಕೈ ಬಿಟ್ಟ ಹೆಸರುಗಳನ್ನು ಮತ್ತೆ ಪಟ್ಟಿಗೆ ಸೇರಿಸಿ ಬಡವರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಅ.10 ರಿಂದ ನಿರಂತರ ಧರಣಿ ನಡೆಸಿ ನ್ಯಾಯ ಸಿಗುವವರೆಗೂ ಕಾನೂನಾತ್ಮಕವಾಗಿ ಹೋರಾಟ ನಡೆಸಬೇಕಾಗುತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಲಿಂಗಯ್ಯ ಯಶವಂತಪುರ, ರಮೇಶ್ ಲಂಕೆ, ಶಿವರಾಜು ಅರಸು, ಪ್ರಕಾಶ್‌ಹಾದನೂರು, ದಸಂಸ ಮುಖಂಡ ಲಕ್ಷ್ಮಣ್, ಎಂ.ಸಿ. ತಳಲು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ವೆಂಕಟರಾಮು, ಮುಳ್ಳೂರು ಗ್ರಾಪಂ ಸದಸ್ಯರಾದ ಶಿವಚನ್ನ, ಪುಟ್ಟಸ್ವಾಮಿ, ಹಂಚೀಪುರ ಗ್ರಾಪಂ ಸದಸ್ಯ ನಾಗರಾಜ್, ಹೆಗ್ಗನೂರು ಗ್ರಾಪಂ ಸದಸ್ಯ ಲೋಕೇಶ್, ನಾಗೇಂದ್ರ, ವಿನೋದ್, ರವಿಕುಮಾರ್ ಹಾದನೂರು, ಆರ್‌ಸಿಬಿಬಿ ಹೋಟೆಲ್ ಮಾಲೀಕ ಬೆಟ್ಟನಾಯಕ, ಸಾಗರೆ ಶಂಕರ್, ಇಂದ್ರಕುಮಾರ್ ಹಾಗೂ 300 ಕ್ಕು ಹೆಚ್ಚು ಸಂತ್ರಸ್ತರು ಇದ್ದರು.