ನ್ಯೂಸ್

ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮುಖ್ಯ

ಪರಿಸರ ಸಂರಕ್ಷಣೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂದು ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ ಸಾಂಬಶಿವಯ್ಯ ಹೇಳಿದರು.

ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸಮಾಜ ಕಾರ್ಯ ವಿಭಾಗ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಜೈ ಕರ್ನಾಟಕ ಸ್ಟೇಟ್‌ಯೂತ್ ನೆಟ್‌ವರ್ಕ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ನಮ್ಮೆಲ್ಲರ ಪರಿಸರ ಸಂರಕ್ಷಣೆಯ ಬದ್ಧತೆಯನ್ನು ಪ್ರತಿನಿಧಿಸುತ್ತವೆ. ಈ ರೀತಿಯ ಚಟುವಟಿಕೆಗಳು ಜನರ ಮತ್ತು ಸರ್ಕಾರದ ಸಂಯುಕ್ತ ಸಹಕಾರದಿಂದ ಮಾತ್ರ ಯಶಸ್ವಿಯಾಗಬಹುದು ಎಂದರು. ಆರು ಅಭಿವೃದ್ಧಿ ಗುರಿಗಳನ್ನು ಉಲ್ಲೇಖಿಸುತ್ತಾ ಶುದ್ಧ ಜಲ, ಶುದ್ಧ ಶಕ್ತಿ, ಜವಾಬ್ದಾರಿಯುತ ಉಪಭೋಗ ಮತ್ತು ಸಹಯೋಗ ಮತ್ತು ಪರಿಸರ ಸಮತೋಲನ, ಭೂಮಿಯ ಜೀವ ಜಗತ್ತು ಮತ್ತು ಹವಾಮಾನ ಕ್ರಿಯೆಯಾಗಿದೆ ಎಂದರು.

ಮೈಸೂರಿನಲ್ಲಿ ನವೀಕರಿಸಿದ ಶಕ್ತಿಯ ಬಳಕೆ ಶೇ.63 ರಷ್ಟು ಇರುವುದು ರಾಜ್ಯದ ಪರಿಸರ ಸ್ನೇಹಿ ಅಭಿವೃದ್ಧಿಯ ಒಂದು ಉತ್ತಮ ಉದಾಹರಣೆ ಎಂದು ಹೇಳಿದರು.

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಅರಣ್ಯವೃದ್ಧಿ ಕಾರ್ಯಗಳು, ಕುಕ್ಕರಹಳ್ಳಿ ಕೆರೆಯ ಪುನರುಜ್ಜೀವನ ಕಾರ್ಯಗಳು ಹಾಗೂ ಗ್ರಾಮಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜೈವಿಕಕೃಷಿಯ ಪ್ರೋತ್ಸಾಹದ ಕುರಿತು ತಿಳಿಸಿದರು.

ಸಂಸ್ಥೆಯ ನಿರ್ದೇಶಕಿ ಸರಸ್ವತಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ವೈ.ಎನ್.ಮಮತಾ, ಕೃಷಿ ಅಧಿಕಾರಿ ವೆಂಕಟೇಶ್, ಪತ್ರಕರ್ತೆ ಕುಸುಮಾ ಆಯರಹಳ್ಳಿ ಇತರರಿದ್ದರು.