ಮನುಷ್ಯ ಉತ್ತಮವಾಗಿ ಜೀವನ ಸಾಗಿಸಬೇಕಾದರೆ ಆರೋಗ್ಯಕರವಾದ ಮಣ್ಣು, ಗಾಳಿ ಹಾಗೂ ನೀರು ಬಹಳ ಮುಖ್ಯ. ಇದನ್ನು ಉಳಿಸಿಕೊಳ್ಳುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹಿರಿಯ ಪರಿಸರವಾದಿ ಯು.ಎನ್. ರವಿಕುಮಾರ್ ಮನವಿ ಮಾಡಿದರು.
ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್ಎಚ್‌ಪಿ) ಹಾಗೂ ಕರ್ನಾಟಕ ಸ್ಟೇಟ್ ಯೂತ್ ನೆಟ್‌ವರ್ಕ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಮೈಸೂರು ಜಿಲ್ಲೆಯ ಪರಿಸರ ಸಂರಕ್ಷಣೆಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆ’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪರಿಸರ ಸಂರಕ್ಷಣೆಯು ನಮ್ಮ ಕನಸಿನ ಭಾಗವಾಗಬೇಕು. ಆದರೆ ಇಂತಹ ಪ್ರಮುಖ ವಿಚಾರದ ಕಡೆ ಗಮನವಿಡದೇ ಯಾವಾಗಲೂ ಧಾವಂತದಲ್ಲಿ ಜೀವನ ಸಾಗಿಸುತ್ತಿರುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದ ಸಂಪ್ರದಾಯ ದೇಶ ನಮ್ಮದು. ಆದರೆ, ಅದು ಕ್ರಮೇಣ ಬದಲಾಗಿದೆ. ಮೈಸೂರಿನಲ್ಲಿ ಹಿಂದೆ ಬಹಳ ಶುದ್ಧ ಪರಿಸರ ಇತ್ತು. ಆದರೆ, ಈಗ ಆತಂಕ ಆಗುವಂತಹ ಪರಿಸ್ಥಿತಿ ಇದೆ. ನೀರಿನ ಮೂಲಗಳೆಲ್ಲವೂ ಈಗ ಉಪಯೋಗಿಸಲಾಗದ ಕಲ್ಮಶ ನೀರನ್ನು ಹರಿಬಿಡುವ ತಾಣಗಳಾಗಿ ಹೋಗಿವೆ. ಪರಿಸರದ ಜತೆಗಿನ ಸಂಬಂಧ ಬದಲಾಗಿ, ಅದರಿಂದ ದೂರಾಗುತ್ತಿದ್ದೇವೆ. ಪರಿಸರದೊಂದಿಗೆ ಸಾಮೀಪ್ಯವನ್ನು ಸಾಧಿಸುವುದೇ ಈಗಿನ ಅಗತ್ಯವಾಗಿದೆ ಎಂದರು.
ಭಾರತವು ಅತಿ ಹೆಚ್ಚು ಯುವ ಸಮೂಹವನ್ನು ಒಳಗೊಂಡಿರುವ ದೇಶವಾಗಿದೆ. ಯುವ ಜನರಲ್ಲಿ ಶೇ.40ರಿಂದ 50ರಷ್ಟು ಮಂದಿ ನಗರ ಪ್ರದೇಶಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ನಾಗರಿಕತೆ ಬೆಳೆದಂತೆಲ್ಲ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವುದು ಯುವಜನರ ಕೈಯಲ್ಲಿದೆ. ಇದಕ್ಕಾಗಿ, ಪರಿಸರಕ್ಕೆ ಪೂರಕವಾದ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಇದರಿಂದ ಮುಂದಿನ ಜನಾಂಗಕ್ಕೂ ಉತ್ತಮ ಪರಿಸರವನ್ನು ಉಳಿಸಬಹುದು ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಪ್ರೊ.ಕೆ.ಕಾಳಚನ್ನೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ, ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ. ಪ್ರಭುಸ್ವಾಮಿ, ವಲಯ ಅರಣ್ಯಾಧಿಕಾರಿ ಡಿ.ಸಿ.ರಾಧಾ, ಆರ್‌ಎಲ್ಎಚ್‌ಪಿ ನಿರ್ದೇಶಕಿ ಸರಸ್ವತಿ, ಕಾರ್ಯದರ್ಶಿ ವಿ.ಕೆ. ಜೋಸ್, ಯೋಜನಾ ವ್ಯವಸ್ಥಾಪಕಿ ಪ್ರತಿಮಾ, ಕರ್ನಾಟಕ ರಾಜ್ಯ ಯೂತ್ ನೆಟ್‌ವರ್ಕ್ ಸದಸ್ಯ ಮಹೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.