ಬೈಲಕುಪ್ಪೆ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಟಿಬೇಟಿಯನ್ ಕಗ್ಗುೃ ನಳಂದ ಮೋನಸ್ಟ್ರಿ ಸಂಸ್ಥೆ ವತಿಯಿಂದ ಶುಕ್ರವಾರ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 17ನೇ ಧರ್ಮ ಗುರು ಗ್ಯಾಲ್ವಂಗ್ ಕರ್ಮಪ್ಪ ಅವರ 39ನೇ ಜಯಂತಿ ಮತ್ತು ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಬಾಲ್ಯದಿಂದಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವು ಹೊಂದುವುದು ಅಗತ್ಯ. ಜತೆಗೆ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಅಲ್ಲದೆ ಪ್ಲಾಸಿಕ್ ಬಳಕೆಯಿಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ ಎಂದರು.
ಹೆಚ್ಚು ಮರಗಳನ್ನು ಬೆಳೆಸುವುದರಿಂದ ವ್ಯಕ್ತಿ ಆರೋಗ್ಯದಿಂದಿರಲು ಸಾಧ್ಯ. ಈ ಕಾರಣಕ್ಕಾಗಿ ಅನೇಕ ಸಂಘ-ಸಂಸ್ಥೆಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಟಿಬೆಟಿಯನ್ ನಳಂದ ಗುರುಕುಲ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾಂತಿ, ಸೌಹಾರ್ದತೆ ಸಾರುವ ಬುದ್ಧನ ತತ್ವ ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಅನಿವಾರ್ಯ. ನಾವೆಲ್ಲರೂ ಬುದ್ಧನ ಹಾದಿಯಲ್ಲಿ ನಡೆಯಬೇಕಾಗಿದೆ. ಗುರು ಹಿರಿಯರನ್ನು ಗೌರವಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ಪರಿಸರ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಳಂದ ಆವರಣದಲ್ಲಿ ಸಸಿ ನೆಟ್ಟು ಗಿಡಕ್ಕೆ ನೀರೆರೆದರು. ಬಳಿಕ ಟಿಬೆಟಿಯನ್ಸ್ ಮಹಿಳೆ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಗ್ಗುೃ ನಳಂದ ವ್ಯವಸ್ಥಾಪಕ ಕರ್ಮ ರೇಂಪೋಜಿ, ಡೌಲ್ ಮಾ, ಪರಿಸರವಾದಿ ಯು.ಎನ್.ರವಿಕುಮಾರ್, ಕೇರಳದ ಅರಣ್ಯ ಸಂಶೋಧನೆ ಸಂಸ್ಥೆಯ ಉಪ ನಿರ್ದೇಶಕ ಡಾ.ಚಂದ್ರಶೇಖರ್, ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಪ್ರಭಾಕರ್, ಸದಸ್ಯ ರಘು, ನಿಸ್ಸಾರ್ ಅಹಮ್ಮದ್, ಕೊಪ್ಪ ವಿಎಸ್‌ಎಸ್‌ಎನ್ ನಿರ್ದೇಶಕ ಸುಬ್ರಮಣ್ಯ, ಪಿಡಿಒ ಬೋರೇಗೌಡ, ಭಾರತ್ ಮಾತಾ ವಿದ್ಯಾ ಸಂಸ್ಥೆಯ ಫಾದರ್ ಸಿಬಿಚನ್ ಪೌಲ್ ಇತರರು ಹಾಜರಿದ್ದರು.