ಬಾಳೆಹೊನ್ನೂರು: ಪ್ರತಿ ವ್ಯಕ್ತಿಯೂ ಒಂದೊಂದು ಗಿಡ ನೆಟ್ಟು ಪೋಷಿಸಿದರೆ ನಮ್ಮ ಜೀವನಕ್ಕೆ ಉತ್ತಮ ಗಾಳಿ ದೊರೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್‌ಯಿಂದ ಮಾಗೋಡು ಕಣತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವನಮಹೋತ್ಸವದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು. ಪ್ರತಿ ಮನೆಯಲ್ಲಿ ಒಂದು ಗಿಡ ನೆಟ್ಟು ಪೋಷಿಸಿದರೆ ಅರಣ್ಯ ಸಂಪತ್ತು ವೃದ್ಧಿಯಾಗಲಿದೆ. ಗಿಡ, ಮರಗಳಿಂದ ನೆರಳು, ಹಣ್ಣು ದೊರೆಯಲಿದ್ದು ಅಂತರ್ಜಲ ವೃದ್ಧಿಗೂ ಪೂರಕವಾಗಲಿದೆ. ಈಗ ನಾವು ಒಂದೊಂದು ಗಿಡ ನೆಟ್ಟರೆ ಮುಂದಿನ ಪೀಳಿಗೆಗೆ ಪರಿಸರ ಉಳಿಯಲಿದೆ ಎಂದರು.
ಮನುಷ್ಯ ಆಸೆ, ಆಕಾಂಕ್ಷೆಗಳಿಗಾಗಿ ಪರಿಸರವನ್ನು ಬಲಿ ಕೊಡುತ್ತಿದ್ದು ಇದರಿಂದಾಗಿಯೇ ಹಲವೆಡೆ ಭೂಕುಸಿತ, ನೀರಿಗೆ ಹಾಹಾಕಾರ, ಆಹಾರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್ ಮಾತನಾಡಿ, ಜಾಗತಿಕ ತಾಪಮಾನದಿಂದ ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಎಲ್ಲೆಡೆ ಅವಘಡಗಳು, ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವುದಕ್ಕೆ ಪರಿಸರ ನಾಶವೇ ಕಾರಣ. ಪರಿಸರ ರಕ್ಷಣೆಯಿಂದ ಉತ್ತಮ ಆರೋಗ್ಯ ದೊರೆಯಲು ಸಾಧ್ಯ ಎಂದರು.
ಲಯನ್ಸ್ ಕ್ಲಬ್ ಖಜಾಂಚಿ ಕೆ.ಸಿ.ರವೀಂದ್ರ, ವಲಯ ಅಧ್ಯಕ್ಷ ಎಂ.ಡಿ.ಶಿವರಾಮ್, ಪೂರ್ವಾಧ್ಯಕ್ಷ ಎಂ.ಆರ್.ಮಂಜುನಾಥ್, ಸದಸ್ಯರಾದ ದಿವಾಕರ್, ವಿಜಯೇಂದ್ರ, ನವೀನ್, ಮುಖ್ಯಶಿಕ್ಷಕ ಮಂಜುನಾಥ್ ಮತ್ತಿತರರಿದ್ದರು.