ಶೃಂಗೇರಿ: ಅರಣ್ಯ ಉಳಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಸಿವಿಲ್ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.
ಜೆಸಿಬಿಎಂ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಸಂರಕ್ಷಣೆಗೆ ಕಾನೂನು ಇದ್ದರೂ ಅರಣ್ಯ ನಾಶ ಮುಂದುವರಿದಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆ. ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ ನಗರ ಬೆಳೆಯುತ್ತಿದ್ದಂತೆ ಸುತ್ತಲಿನ ಅರಣ್ಯವನ್ನು ನಮ್ಮ ಸ್ವಾರ್ಥಕ್ಕಾಗಿ ಕಡಿದು ಹಾಕುತ್ತಿದ್ದೇವೆ. ಕೈಗಾರಿಕೆ ವಿಸ್ತರಣೆ, ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ನಿರಂತರವಾಗಿ ನಡೆಯುತ್ತಿದೆ ಎಂದರು.
ಜೈವಿಕ ವೈವಿಧ್ಯ ಕಾಪಾಡುವುದು ನಮ್ಮ ಕರ್ತವ್ಯ. ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪರಿಸರ ಜಾಗೃತಿ ಕುರಿತು ಮುಂದಿನ ಪೀಳಿಗೆಗೆ ಅರಿವು ಮಾಡಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅರಣ್ಯ ಕಾಯ್ದೆ ಬಗ್ಗೆ ಮಾತನಾಡಿದ ವಕೀಲ ಕೆ.ಆರ್.ಸುರೇಶ್, ಅರಣ್ಯ ಕಾಯ್ದೆ ಪ್ರಬಲವಾಗಿದ್ದು ಅಕ್ರಮ ಕಾಡು ಕಡಿತ ತಪ್ಪಿಸಲು ಕಾನೂನು ಇದೆ. ರೈತರು ತಮ್ಮ ಜಮೀನಿನಲ್ಲಿರುವ ಕಾಡು ಮರ ಕಡಿಯಲು ಇಲಾಖೆ ಅನುಮತಿ ಪಡೆಯುವುದು ಅಗತ್ಯ ಎಂದರು.
ಕಾಲೇಜಿನ ಪ್ರಾಧ್ಯಾಪಕ ವಿದ್ಯಾಧರ್, ವಕೀಲರ ಸಂಘದ ಅಧ್ಯಕ್ಷ ಮಹೇಶ್, ಜೆಸಿಬಿಎಂ ಕಾಲೇಜಿನ ಪಿಯು ವಿಭಾಗದ ಪ್ರಾಚಾರ್ಯ ಎ.ಜಿ.ಪ್ರಶಾಂತ್, ಸಂತೋಷ್‌ಕುಮಾರ್, ವಲಯ ಅರಣ್ಯಧಿಕಾರಿ ಮಧುಕರ್ ಇದ್ದರು.