ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಸಂಖ್ಯಾಬಲದ ಆಧಾರದಲ್ಲಿ ಏಳು ಸ್ಥಾನಗಳನ್ನು ತುಂಬಲು ಶಕ್ತವಾದ ಮೂರು ಪಕ್ಷಗಳು ಸದ್ಯಕ್ಕೆ ಚರ್ಚೆಗೆ ಸೀಮಿತವಾಗಿವೆ. ಮತಗಳ ಕೋಟಾ ಲೆಕ್ಕಾಚಾರದ ಪ್ರಕಾರ ಆಡಳಿತ ಬಿಜೆಪಿ ನಾಲ್ಕು, ಪ್ರತಿಪಕ್ಷಗಳಾದ ಕಾಂಗ್ರೆಸ್ ಎರಡು ಮತ್ತು ಜೆಡಿಎಸ್ ಒಂದು ಸ್ಥಾನ ತುಂಬುವ ಸಾಮರ್ಥ್ಯ ಹೊಂದಿವೆ.
ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾದರೂ ಮೂರು ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಾಲೀಮು ಮುಂದುವರಿಸಿವೆ. ಎರಡನೇ ದಿನವಾದ ಬುಧವಾರವೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಮೇ 24 ಕೊನೆಯ ದಿನವಾಗಿದ್ದು, ಜೂ.3ರಂದು ಮತದಾನ ನಡೆಯಲಿದೆ. ಸಂಖ್ಯಾಬಲಕ್ಕೆ ಅನುಗುಣ ವಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ. ಆದರೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣ ಅಭ್ಯರ್ಥಿಗಳ ಆಯ್ಕೆಯೇ ಮೂರು ಪಕ್ಷಗಳ ನಾಯಕರಿಗೆ ಸವಾಲಾಗಿದೆ.
ಆದ್ಯತೆ ಚಿಂತನೆ: ಹೊಸ ಪ್ರಯೋಗ, ಸಮೀಕರಣದಲ್ಲಿ ಮೂರು ಪಕ್ಷಗಳಿಗೆ ಆಸಕ್ತಿ ಇದ್ದಂತಿಲ್ಲ. ಸಂಭಾವ್ಯ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಕಡೆಗೆ ದೃಷ್ಟಿ ನೆಟ್ಟಿವೆ. ಅಲ್ಲದೆ, ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರುವ ಹಿನ್ನೆಲೆಯಲ್ಲಿ ಜಾತಿ-ವರ್ಗಗಳಿಗೆ ಆದ್ಯತೆ ನೀಡುವ ಗಂಭೀರ ಚಿಂತನೆ ನಡೆಸಿವೆ. ನಾಲ್ಕಂಕಿಯ ಬಿಜೆಪಿಗೆ ಎಲ್ಲರನ್ನು ಸಮಾಧಾನಪಡಿಸುವುದು ಸುಲಭವಲ್ಲ. ಎರಡಂಕಿಯ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಒಂದಂಕಿಯ ಜೆಡಿಎಸ್ ನಾಯಕರಿಗೆ ಅನಿವಾರ್ಯತೆ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯತ್ತ ಗಮನ: ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆ ದೆಹಲಿಯಲ್ಲಿ ಗುರುವಾರ ನಡೆಯಲಿದ್ದು, ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯೇ ಪ್ರಧಾನ ಕಾರ್ಯಸೂಚಿ ಎಂದು ಮೂಲಗಳು ಮಾಹಿತಿ ನೀಡಿವೆ. ರಾಜ್ಯದಲ್ಲಿ ಯಾವುದೇ ಚುನಾವಣೆ, ನೇಮಕಗಳಿದ್ದರೂ ಅಚ್ಚರಿ ಆಯ್ಕೆ ಸೂತ್ರವನ್ನು ವರಿಷ್ಠರು ಅನುಸರಿಸಿದ್ದು, ಈ ಬಾರಿ ನಡೆಯ ಬಗ್ಗೆ ಪಕ್ಷದೊಳಗೆ ಕುತೂಹಲ ಹೆಚ್ಚಿದೆ.
ಬಸವರಾಜ ಹೊರಟ್ಟಿ ಅನುಭವ, ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಭರವಸೆ ನೀಡಿದ್ದಾರೆ. ಹೊರಟ್ಟಿ ಸ್ವಇಚ್ಛೆಯಿಂದ ಬಂದಿದ್ದು, ಪಕ್ಷದ ಎಲ್ಲ ನಾಯಕರ ಸಹಮತವಿದೆ. ಅವರ ಸೇರ್ಪಡೆಯಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ. | ಬಸವರಾಜ ಬೊಮ್ಮಾಯಿ ಸಿಎಂ
ವಿಧಾನ ಪರಿಷತ್ನ ಚರ್ಚೆಯ ಸತ್ವ, ಮೌಲ್ಯ ಹೆಚ್ಚಿಸುವವರ ಬದಲಿಗೆ ಲಾಭ-ನಷ್ಟದ ಲೆಕ್ಕಾಚಾರ, ಅತೃಪ್ತಿ ಶಮನ ಹಾಗೂ ಓಲೈಕೆ ಆಧಾರದಲ್ಲಿ ಅಭ್ಯರ್ಥಿಗಳ ಹೆಸರು ಪರಿಗಣಿಸುವ ಲಕ್ಷಣಗಳಿವೆ. ಆಯಾ ರಾಜಕೀಯ ಪಕ್ಷಗಳ ರಾಜ್ಯನಾಯಕರ ಹಂತದ ಯೋಚನೆ-ಸಮಾಲೋಚನೆಗಳು ಇದೇ ದಾರಿಯಲ್ಲಿ ಸಾಗಿದ್ದು, ‘ಬಲಾಢ್ಯ’ರು ಮೇಲ್ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಡಳಿತ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿ, ನಿಗದಿತ ಮಾನದಂಡದ ಪ್ರಕಾರ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಸೇರಿ ಒಟ್ಟು 35 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳುಹಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಖಾಸಗಿ ಪ್ರವಾಸದಲ್ಲಿದ್ದು, ರಾಜ್ಯಕ್ಕೆ ಹಿಂತಿರುಗಿದ ನಂತರವೇ ಅಧಿಕೃತ ಚರ್ಚೆ ಹಾಗೂ ಸಭೆ ನಡೆಯ ಬಹುದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮ ದಿನದ ನಿಮಿತ್ತ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ಔಪಚಾರಿಕವಾಗಿ ನಡೆದಿದ್ದು, ಚುನಾವಣೆ ವಿಚಾರ ಪ್ರಸ್ತಾಪವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿಗೆ ಮೂರನೇ ಸ್ಥಾನ ಗೆಲ್ಲಲು, ಕಾಂಗ್ರೆಸ್ಗೆ ಎರಡನೇ ಹಾಗೂ ಜೆಡಿಎಸ್ಗೆ ಒಂದು ಸ್ಥಾನ ಗೆಲ್ಲುವುದಕ್ಕೆ ಬೇಕಾದ ಸಂಖ್ಯಾಬಲ ಇಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳೆರಡೂ ಜೆಡಿಎಸ್ ಮೇಲೆ ಅವಲಂಬಿತವಾಗಲೇಬೇಕಾಗಿದೆ.
ಜೆಡಿಎಸ್ ಅಭ್ಯರ್ಥಿ ಪಕ್ಷೇತರವಾಗಿ ಸ್ಪರ್ಧಿಸಿದರೆ ತಮ್ಮ ಹೆಚ್ಚುವರಿ ಮತಗಳನ್ನು ಕೊಡಿಸಲು ಬಿಜೆಪಿ ಸಿದ್ಧವಾಗಿತ್ತು. ಆದರೆ ಜೆಡಿಎಸ್ ನಾಯಕರು ಸೋಲಲಿ ಅಥವಾ ಗೆಲ್ಲಲಿ ಅಧಿಕೃತವಾಗಿ ಪಕ್ಷದಿಂದಲೇ ಸ್ಪರ್ಧಿಸಬೇಕೆಂಬ ನಿರ್ಧಾರ ಕೈಗೊಂಡರು. ರಾಜ್ಯಸಭೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಗೆಲ್ಲಲು ಬಿಡಬಾರದೆಂಬ ರಾಷ್ಟ್ರ ಮಟ್ಟದ ಲೆಕ್ಕಾಚಾರದಲ್ಲಿ ತೊಡಗಿರುವ ಕಾಂಗ್ರೆಸ್, ತಮ್ಮ ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಕೊಡಲು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ರಾಜ್ಯದ ಮುಖಂಡರೊಬ್ಬರು ಸಮ್ಮತಿಸಿದ್ದಾರೆಂದು ಮೂಲಗಳು ಹೇಳುತ್ತವೆ.
ಕಾಂಗ್ರೆಸ್ನ ಈ ನಡೆ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗುವುದು ಬಹುತೇಕ ಪಕ್ಕಾ ಆಗಿದೆ. ಅವರೇ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದರೆ ಈಗಾಗಲೆ ಪಕ್ಷದಲ್ಲಿ ಚರ್ಚೆ ಮಾಡಿದೆ.
ಜೆಡಿಎಸ್ ಯಾವಾಗ ಅಧಿಕೃತವಾಗಿಯೇ ಸ್ಪರ್ಧಿಸುವ ನಿರ್ಧಾರ ಕೈಗೊಂಡಿತೋ ಆಗ ಬಿಜೆಪಿ ಬೇರೆಯದೆ ಆದ ಲೆಕ್ಕಾಚಾರ ಹಾಕಿಕೊಂಡಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸಂಬಂಧ ಚೆನ್ನಾಗಿಲ್ಲ. ಜೆಡಿಎಸ್ ಸ್ಪರ್ಧೆ ಮಾಡಿದರೂ ಕಾಂಗ್ರೆಸ್ ಬೆಂಬಲ ನೀಡಲಾರದು, ನಮ್ಮ ಪಕ್ಷದ ಮೂರನೇ ಅಭ್ಯರ್ಥಿಗೆ ಮೊದಲ ಇಬ್ಬರು ಅಭ್ಯರ್ಥಿಗಳ ಎರಡನೇ ಪ್ರಾಶಸ್ಱ ಮತಗಳನ್ನು ಹಾಕಿಕೊಳ್ಳುವ ಮೂಲಕ ಸುಲಭವಾಗಿ ಗೆಲ್ಲಬಹುದು ಎಂಬುದು ಆ ಲೆಕ್ಕಾಚಾರ ಆಗಿತ್ತು. ಇದೀಗ ಬರುತ್ತಿರುವ ಮಾಹಿತಿಗಳು ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆಗಳನ್ನು ತೋರಿಸುತ್ತಿವೆ. ಆದ್ದರಿಂದ ಮೂರನೇ ಸ್ಥಾನಕ್ಕೆ ಸ್ಪರ್ಧಿಸದೆ ದೂರ ಉಳಿಯಬಹುದು ಎಂದು ಪಕ್ಷದ ಮೂಲಗಳು ಹೇಳುತ್ತವೆ.