ನ್ಯೂಸ್

ಪರಿಶ್ರಮದಿಂದ ಕ್ರೀಡೆಯಲ್ಲಿ ಸಾಧನೆ ಸಾಧ್ಯ

ಪರಿಶ್ರಮದಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ವಿವೇಕ ಎಕ್ಸೆಲ್ ಅಕಾಡೆಮಿ ನಿರ್ದೇಶಕ ನಾಗೇಶ್ ಅಭಿಪ್ರಾಯಪಟ್ಟರು.

ಜಿಲ್ಲಾ ಅಮೆಚೂರ್ ಥ್ರೋಬಾಲ್ ಅಸೋಸಿಯೇಷನ್ ಮತ್ತು ಕುವೆಂಪು ನಗರದ ವಿವೇಕ ಎಕ್ಸೆಲ್ ಅಕಾಡೆಮಿ ಸಹಯೋಗದಲ್ಲಿ ಅಕಾಡೆಮಿ ಆಟದ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಥ್ರೋಬಾಲ್ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತರಬೇತಿ ನೀಡಿರುವುದು ಉತ್ತಮ ಕಾರ್ಯವಾಗಿದೆ. ಬೇಸಿಗೆ ರಜೆಯನ್ನು ಶಿಬಿರದಲ್ಲಿ ಭಾಗವಹಿಸಿದ್ದ 30ಕ್ಕೂ ಹೆಚ್ಚು ಮಕ್ಕಳು ಸದುಪಯೋಗಪಡಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಅಮೆಚೂರ್ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ ರಾಷ್ಟ್ರಮಟ್ಟದ ಸಬ್ ಜೂನಿಯರ್ ಮತ್ತು ಜೂನಿಯರ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಥ್ರೋಬಾಲ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರರು ಹಾಗೂ ಶಿಬಿರದ ತರಬೇತುದಾರರಾದ ಅಂತಾರಾಷ್ಟ್ರೀಯ ಥ್ರೋಬಾಲ್ ಆಟಗಾರ್ತಿ, ಯೋಗಶ್ರೀ ಮತ್ತು ರಾಷ್ಟ್ರೀಯ ಆಟಗಾರ ಶಿವರಾಜ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ದೃಢೀಕರಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ಅಸೋಸಿಯೇಷನ್ ಉಪಾಧ್ಯಕ್ಷೆ ಭವಾನಿ ನಾಗೇಶ್, ಕಾರ್ಯದರ್ಶಿ ಎನ್.ಕಾಶೀನಾಥ್, ಅಂತಾರಾಷ್ಟ್ರೀಯ ಥ್ರೋಬಾಲ್ ತೀರ್ಪುಗಾರ ಎನ್.ಎಸ್. ಸುಬ್ರಹ್ಮಣ್ಯ, ತರಬೇತಿ ಶಿಬಿರದ ಸಂಘಟಕಾ ಪಿ.ಮಹದೇವ, ಅಸೋಸಿಯೇಷನ್ ಪದಾಧಿಕಾರಿಗಳಾದ ಆಂತೋನಿ ಬ್ಯಾಪಿಟಿಸ್ಟ್, ರಾಕೇಶ್ ಕುಮಾರ್, ಹೇಮಂತ್ ಕುಮಾರ್, ಶ್ರೀನಿವಾಸ್, ಪ್ರಸನ್ನ, ಮುರಳಿ, ಪವನ್ ಇದ್ದರು.