ತಿ.ನರಸೀಪುರ ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಎಸ್.ಸಿ.ಶಿವಮೂರ್ತಿ ಉದ್ಘಾಟಿಸಿದರು.ಎಂ.ವಿ.ಶಿವಶಂಕರಮೂರ್ತಿ, ನಾಗೇಶ್, ಮರಿಸ್ವಾಮಿ, ಸುಬ್ಬಣ್ಣ, ಸೋಮಶೇಖರ್, ರವಿಕುಮಾರ್ ಇತರರಿದ್ದರು.  
ನ್ಯೂಸ್

ಪರಿಪೂರ್ಣ ವ್ಯಕ್ತಿತ್ವ ರೂಪಿಸುವುದೇ ಶಿಕ್ಷಣ

ತಿ.ನರಸೀಪುರ : ಓದು-ಬರಹ ನೀಡಿದ ಮಾತ್ರಕ್ಕೆ ಶಿಕ್ಷಣ ಆಗುವುದಿಲ್ಲ. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಓರೆ ಹಚ್ಚುವ ಕೆಲಸ ನಿರಂತರವಾಗಿ ಮಾಡುತ್ತಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಸಲಹೆ ನೀಡಿದರು.

ತಾಲೂಕಿನ ಸಿ.ಬಿ.ಹುಂಡಿ ಕ್ಲಸ್ಟರ್ ವ್ಯಾಪ್ತಿಯ ಚಂದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಕ್ರೀಡೆ, ಪಠ್ಯೇತರ ಚಟುವಟಿಕೆ, ಪ್ರತಿಭಾ ಕಾರಂಜಿ, ಕಲಿಕಾ ಹಬ್ಬದಂತಹ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಪರಿಪೂರ್ಣ ವ್ಯಕ್ತಿತ್ವ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದೇವೆ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಹಲವಾರು ವೇದಿಕೆಗಳನ್ನು ರೂಪಿಸುತ್ತೇವೆ. ಇಂತಹ ಕಾರ್ಯಕ್ರಮಗಳು ಪಾಲಕರ ಪ್ರೋತ್ಸಾಹ, ಮಕ್ಕಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಶಾಲಾ ವಾರ್ಷಿಕೋತ್ಸವ ಎಂದರೆ ಮಕ್ಕಳ ಸಂಭ್ರಮದ ಹಬ್ಬ. ಇಡೀ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಊರಿನ ಹಬ್ಬದ ರೀತಿ ಆಚರಿಸಿರುವುದು ಸಂತಸದ ವಿಚಾರ. ಚಂದಳ್ಳಿ ಗ್ರಾಮಸ್ಥರ ಬೇಡಿಕೆಯನ್ನು ಮನ್ನಿಸಿ ನೂತನ 2 ಕೊಠಡಿಗಳಿಗೆ ಈಗಾಗಲೇ ಮಂಜೂರಾತಿ ನೀಡಿದ್ದೇವೆ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ಮಾತನಾಡಿ, ಚಂದಹಳ್ಳಿ ಅಂತಹ ಪುಟ್ಟ ಗ್ರಾಮದಲ್ಲಿ ಸರ್ಕಾರಿ ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತಹ ವೇದಿಕೆ ಮತ್ತು ವಿದ್ಯಾರ್ಥಿಗಳನ್ನು ನೋಡಿದಾಗ ಹೆಮ್ಮೆಯಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಭುಗಳು. ಪ್ರತಿಭೆ ಯಾರ ಸ್ವತ್ತಲ್ಲ. ಹಾಗಾಗಿ ಅದನ್ನು ಹುಡುಕುವಂತಹ ಕೆಲಸ ಮತ್ತು ವೇದಿಕೆ ನಾವು ನಿರ್ಮಾಣ ಮಾಡಬೇಕು. ಅಂತಹ ಕೆಲಸ ಚಂದಹಳ್ಳಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಮಾಡಿದ್ದಾರೆ. ಮಕ್ಕಳ ಭವಿಷ್ಯವನ್ನು ಪ್ರಜ್ವಲಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಆರ್‌ಸಿ ನಾಗೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಅಪರೂಪ. ಶಿಕ್ಷಣವೇ ಶಕ್ತಿ, ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ.ಪಾಲಕರು ತಾವು ಓದಿಲ್ಲ ಎಂಬ ನೆಪ ಬಿಟ್ಟು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡದೇ ಓದಿನ ಆಸಕ್ತಿ ಮೂಡಿಸಬೇಕು. ಮಕ್ಕಳ ಭವಿಷ್ಯಕ್ಕೆ ಹಣ ಆಸ್ತಿ ಮಾಡುವುದು ಬಿಟ್ಟು ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಭವಿಷ್ಯದ ಆಸ್ತಿಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷಣ ಪರಿವೀಕ್ಷಕ ಮರಿಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ಬಣ್ಣ, ಗ್ರಾಮೀಣ ಶಿಕ್ಷಕರ ಸಂಘದ ಕಾರ್ಯದರ್ಶಿ ಸೋಮಶೇಖರ್, ಗಾಯಕ ರವಿಕುಮಾರ್, ಸಾಹಿತಿ ಇರಸವಾಡಿ ಮಹೇಶ್, ಮುಖ್ಯ ಶಿಕ್ಷಕ ಎಂ.ಕೊಂಗಯ್ಯ, ಸಿಆರ್‌ಪಿ ಚಲುವರಾಜು, ಎಸ್‌ಡಿಎಂಸಿ ಅಧ್ಯಕ್ಷೆ ಮಾದಲಾಂಬಿಕಾ, ಉಪಾಧ್ಯಕ್ಷ ನಂಜಯ್ಯ, ಶಿಕ್ಷಕರಾದ ಸೂರ್ಯ ಕುಮಾರ್, ಜಯರಾಮ್, ಎಸ್.ಜ್ಯೋತಿ, ಶಾಂಭವಿ, ಗೀತಾ ಮತ್ತಿತರರು ಉಪಸ್ಥಿತರಿದ್ದರು.