ನ್ಯೂಸ್

ಪರಮಹಂಸ ನುಡಿದೀಪ: ಧ್ಯಾನ ಮತ್ತು ಏಕಾಗ್ರತೆಯ ಸಾಧನೆ

ಈ ಆಧುನಿಕ ಜಗತ್ತಿನಲ್ಲಿ ದಿನಕ್ಕೊಬ್ಬ ಗುರು ಉದ್ಭವವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ರೀತಿಯ ಗುರುಗಳ ಗುಂಪಿನಲ್ಲಿ ಯಾರನ್ನು ಆರಿಸಿಕೊಳ್ಳುವುದು ಎಂಬುದೇ ಒಬ್ಬ ಸಾಧಾರಣ ಮನುಷ್ಯನಿಗೆ ಯಕ್ಷಪ್ರಶ್ನೆಯಾಗಿದೆ.

ಗುರು-ಶಿಷ್ಯ ಎಂಬ ವಿಚಾರ ಬಂದಾಗ ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಅನೇಕಾನೇಕ ಗುರು-ಶಿಷ್ಯ ಸಂಬಂಧಗಳನ್ನು ಕಾಣಬಹುದು. ಮೊದಲಿಗೆ ಕಠೋಪನಿಷತ್​ನ ಯಮಧರ್ಮರಾಯ-ನಚಿಕೇತನ ಉದಾಹರಣೆ ಕಂಡರೆ ನಂತರ ಶ್ರೀಕೃಷ್ಣಾರ್ಜುನರನ್ನು ಕಾಣುತ್ತೇವೆ. ತದನಂತರ ಬುದ್ಧ-ಆನಂದ, ಗೋವಿಂದಪಾದ-ಶ್ರೀಮಚ್ಛಂಕರಾಚಾರ್ಯ, ಹಾಗೆಯೇ ಮುಂದುವರಿದಂತೆ ಶ್ರೀ ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ - ಹೀಗೆ ಗುರುಪರಂಪರೆಯನ್ನು ಕಾಣುತ್ತೇವೆ.

ಶ್ರೀ ಶಂಕರ ಭಗವತ್ಪಾದ ವಿರಚಿತ ವಿವೇಕ ಚೂಡಾಮಣಿಯಲ್ಲಿ ನಮಗೆ ಸದ್ಗುರುವಿನ ಸಂಪೂರ್ಣ ಅರ್ಥ ದೊರೆಯುತ್ತದೆ.

ಶಾಂತೋ ಮಹಾಂತೋ ನಿವಸಂತಿ ಸಂತಃ

ವಸಂತವಲ್ಲೋಕಹಿತಂ ಚರಂತಃ |

ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾನ್

ಅಹೇತುನಾನ್ಯಾನಪಿ ತಾರಯಂತಃ ||

‘ಅಗಾಧವಾದ ಮತ್ತು ಜಂಜಡಗಳಿಂದ ಕೂಡಿರುವ ಸಂಸಾರಸಾಗರವನ್ನು ದಾಟಿ ಯಾವ ನಿಮಿತ್ತವೂ ಇಲ್ಲದೆ ಇತರರನ್ನೂ ದಾಟಿಸುವ ಶಾಂತರೂ ಮಹನೀಯರೂ ಆದ ಸತ್ಪುರುಷರು ವಸಂತಕಾಲದಂತೆ ಯಾವಾಗಲೂ ಲೋಕಕ್ಕೆ ಒಳಿತನ್ನೇ ಮಾಡುತ್ತಿರುತ್ತಾರೆ.’

ಇಂತಹ ಗುರು-ಶಿಷ್ಯ ಸಂಬಂಧದ ವಿಚಾರಗಳನ್ನು ಅರಿತವರಿಗೆ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ‘ವಿಶ್ವಗುರು’ವಾಗಿ ತೋರ್ಪಡುತ್ತಾರೆ. ಕಾರಣ, ಅವರು ಯಾವ ರೀತಿಯ ಆಸೆ ಲಾಲಸೆಗಳ ಕಿಂಚಿತ್ ಸ್ಪರ್ಶವೂ ಇಲ್ಲದೆ, ಭೋಗ ಹಾಗೂ ಧನದಾಹಗಳ ಎಳ್ಳಷ್ಟೂ ಸೋಂಕಿಲ್ಲದೆ ನಿತ್ಯಶುದ್ಧನಾದ ಪರಮ ಗುರುವಿನ ಸ್ಥಾನ ಪಡೆದಿದ್ದರು. ನಿಜವಾದ ಗುರುವಿನ ಬಗ್ಗೆ ಅವರು ಹೀಗೆ ವಿವರಿಸುತ್ತಾರೆ:

ಭಕ್ತ: ‘ಗುರುವಿನ ಉಪದೇಶದ ಸಂಬಂಧವಾಗಿ ತಿಳಿಸಿದಿರಲ್ಲ, ಆತನನ್ನು ನಾವು ಪಡೆದುಕೊಳ್ಳುವ ಬಗೆ ಹೇಗೆ?’

ಶ್ರೀ ರಾಮಕೃಷ್ಣರು: ಸಿಕ್ಕಸಿಕ್ಕವರೆಲ್ಲ ಗುರು ಆಗಲಾರರು. ಮರದ ದಿಮ್ಮಿ ತಾನೂ ತೇಲಿಹೋಗಬಹುದು, ಅನೇಕ ಜೀವಜಂತುಗಳನ್ನೂ ಹೊತ್ತುಕೊಂಡು ಹೋಗಬಲ್ಲದು. ಆದರೆ ಬೆಂಡಿನ ಮೇಲೆ ಹತ್ತಿ ಕುಳಿತರೆ, ಬೆಂಡೂ ಮುಳುಗಿಹೋಗುತ್ತದೆ, ಜೊತೆಯಲ್ಲಿ ಹತ್ತಿದವನೂ ಮುಳುಗಿಹೋಗುತ್ತಾನೆ. ಅದಕ್ಕಾಗಿಯೇ ಭಗವಂತನು ಯುಗಯುಗದಲ್ಲೂ ಗುರುರೂಪದಿಂದ ಅವತೀರ್ಣನಾಗುತ್ತಾನೆ. ಸಚ್ಚಿದಾನಂದನೇ ನಿಜವಾದ ಗುರು...’

ಇಂದು ನಾವು ಸಾಮಾನ್ಯವಾಗಿ ಕಾಣುತ್ತಿರುವುದು, ಆಕರ್ಷಣೀಯವಾಗಿರುವ ಬೆಂಡಿನಂತಹ ಗುರುಗಳ ಗುಂಪು! ತಾನೂ ಮುಳುಗಿ, ನಂಬಿದವರನ್ನೂ ಮುಳುಗಿಸುವವರನ್ನು ಕಾಣುತ್ತಿದ್ದೇವೆ. ಪರಮಹಂಸರು ತಿಳಿಸಿದಂತೆ ಭವಸಾಗರವನ್ನು ದಾಟಿಸುವ ಶಕ್ತಿಯುಳ್ಳ ಪ್ರಬಲ ಮರದ ದಿಮ್ಮಿಯಂಥ ಗುರುದೇವನು ನಮಗೆ ದೊರೆಯಬೇಕು.

ಇದೇ ವಿಚಾರವಾಗಿ ಮತ್ತೊಬ್ಬ ಸಾಧಕರ ಅನುಭವವನ್ನು ನೋಡಿ. ‘ಒಮ್ಮೆ ನಾನು ಧ್ಯಾನ ಮಾಡಲು ಕುಳಿತಾಗ, ನನ್ನ ಮನಸ್ಸು ಏನು ಮಾಡಿದರೂ ಏಕಾಗ್ರವಾಗದೆ ಹೋಯಿತು. ನಾನು ಅದನ್ನು ಶ್ರೀ ರಾಮಕೃಷ್ಣರಿಗೆ ತಿಳಿಸಿ ಅವರ ಸಲಹೆ ಕೇಳಿದೆ. ಆಗ ಅವರು ಈ ವಿಷಯದಲ್ಲಿ ತಮ್ಮ ಕೆಲವು ಅನುಭವಗಳನ್ನು ನನಗೆ ತಿಳಿಸಿ, ಕೆಲವು ಉಪಯುಕ್ತ ಸಲಹೆಗಳನ್ನು ಕೊಟ್ಟರು. ಇನ್ನೊಂದು ಸಲ, ನಾನು ಮುಂಜಾನೆಯ ಶಾಂತವಾದ ಸಮಯದಲ್ಲಿ ಧ್ಯಾನಕ್ಕೆ ಕುಳಿತುಕೊಂಡರೆ ಹತ್ತಿರದಲ್ಲಿದ್ದ ಗೋಣಿನಾರಿನ ಕಾರ್ಖಾನೆಯ ಸಿಳ್ಳಿನ ಶಬ್ದ ಧ್ಯಾನಕ್ಕೆ ಭಂಗ ತರುತ್ತಿತ್ತು.

ಶ್ರೀ ರಾಮಕೃಷ್ಣರಲ್ಲಿ ಇದನ್ನು ನಾನು ಹೇಳಿಕೊಂಡಾಗ ಅವರು, ಆ ಸಿಳ್ಳಿನ ಶಬ್ದದ ಮೇಲೆಯೇ ಮನಸ್ಸನ್ನು ಏಕಾಗ್ರಗೊಳಿಸುವಂತೆ ಹೇಳಿದರು. ನಾನು ಅದರಂತೆಯೇ ಮಾಡಿದೆ. ಆ ಉಪಾಯ ತುಂಬ ಯಶಸ್ವಿಯಾಯಿತು. ಇನ್ನೊಂದು ಸಲ, ನಾನು ಎಷ್ಟು ಪ್ರಯತ್ನ ಮಾಡಿದರೂ ನನ್ನ ಶರೀರವನ್ನೇ ಮರೆತು ಸಂಪೂರ್ಣ ಏಕಾಗ್ರತೆಯಿಂದ ಧ್ಯಾನ ಮಾಡಲು ಸಾಧ್ಯವೇ ಆಗಲಿಲ್ಲ. ನಾನಾಗ ಶ್ರೀ ರಾಮಕೃಷ್ಣರ ಮೊರೆಹೋದೆ.

ಆಗ ಅವರು ತಮ್ಮ ಗುರು ತೋತಾಪುರಿ ಮಾಡಿದ್ದ ಉಪಾಯವನ್ನೇ ನನ್ನ ಮೇಲೂ ಪ್ರಯೋಗಿಸಿದರು. ನನ್ನ ಭ್ರೂಮಧ್ಯವನ್ನು ತಮ್ಮ ಉಗುರಿನಿಂದ ಬಲವಾಗಿ ಒತ್ತಿ ಹಿಡಿದು ಹೇಳಿದರು, ‘‘ಈ ನೋವಿನ ಜಾಗದಲ್ಲಿ ನಿನ್ನ ಮನಸ್ಸನ್ನು ಏಕಾಗ್ರಗೊಳಿಸು’’ ಎಂದು. ನಾನು ಹಾಗೆಯೇ ಮಾಡಲು ಪ್ರಯತ್ನಪಟ್ಟೆ; ನೋಡುತ್ತೇನೆ - ನನಗೀಗ ಭ್ರೂಮಧ್ಯದಲ್ಲಿ ನನ್ನ ಮನಸ್ಸನ್ನು ಎಷ್ಟು ಹೊತ್ತು ಬೇಕಾದರೂ ಏಕಾಗ್ರಗೊಳಿಸಲು ಸಾಧ್ಯವಾಗುತ್ತಿದೆ! ಅಲ್ಲದೆ ನನ್ನ ಶರೀರಪ್ರಜ್ಞೆಯನ್ನು ಸಂಪೂರ್ಣ ಮರೆತು ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆ! ಶರೀರವನ್ನೇ ಮರೆತ ಮೇಲೆ ಮೈ ಕೈ ನೋಯುವುದಾಗಲಿ, ಮನಸ್ಸನ್ನು ಅವು ಚಂಚಲಗೊಳಿಸುವುದಾಗಲಿ ದೂರವೇ ಉಳಿಯಿತು. ಆದ್ದರಿಂದ ಧ್ಯಾನ ನಿರಾತಂಕವಾಗಿ ನಡೆಯಿತು.’’

ಈ ತೆರನಾಗಿ ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಬಳಿಗೆ ಬರುತ್ತಿದ್ದ ಎಲ್ಲ ಸಾಧಕರಿಗೆ, ತರಬೇತಿ ನೀಡಿದುದಲ್ಲದೆ ತಾವೂ ಸಾಧನೆಯಲ್ಲಿ ತೊಡಗುತ್ತಿದ್ದರು. ತಮ್ಮ ಬಳಿಗೆ ಸಾರುತ್ತಿದ್ದ ನೂರಾರು ಭಕ್ತರ ನಂಬಿಕೆಗೆ ಯಾವುದೇ ತೆರನಾದ ಚ್ಯುತಿ ಬರದಂತೆ ಅವರವರ ಭಾವಕ್ಕೆ, ಅವರವರ ಭಕುತಿಗೆ ಅನ್ವಯವಾಗುವಂತೆ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿದ್ದರು.