ನ್ಯೂಸ್

ಪರಭಾಷೆ ನಟಿ ರಾಯಭಾರಿಯ ಆಯ್ಕೆ ಸರಿಯಲ್ಲ

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ಗೆ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಮಾಡಿರುವುದನ್ನು ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್ ಖಂಡಿಸಿದ್ದಾರೆ.

1916ರಲ್ಲಿ ನಮ್ಮ ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್ ಈ ಸಂಸ್ಥೆ ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಸ್ಥೆಯ ಸೋಪ್ ದಶಕಗಳಿಂದಲೂ ಎಲ್ಲರ ಮನೆಯಲ್ಲಿ ಸ್ಥಾನ ಪಡೆದಿತ್ತು. ಈ ಸಂಸ್ಥೆಯ ಬಹುತೇಕ ವಸ್ತುಗಳನ್ನು ಬಳಸುತ್ತಿದ್ದವರೇ ಕನ್ನಡಿಗರು. ಇಂಥ ಸಂಸ್ಥೆಗೆ ಪರಭಾಷೆ ನಟಿಯನ್ನು ರಾಯಭಾರಿಯನ್ನಾಗಿ ಮಾಡಿದ್ದು ಹುಚ್ಚುತನ. ಅದು ಸಾಲದೆಂಬಂತೆ ಆರು ಕೋಟಿ ರೂ.ಗಳಿಗೂ ಹೆಚ್ಚು ರೂ. ನೀಡಿ ರಾಯಭಾರಿ ಮಾಡಿರುವುದು ಅಕ್ಷಮ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಸ್ಯಾಂಡಲ್ ಸೋಪ್ ಎನ್ನುವುದೇ ಒಂದು ದೊಡ್ಡ ಬ್ರಾೃಂಡ್ ಆಗಿದೆ. ಮೈಸೂರಿನ ಮಹಾರಾಜರು ಅಂದು ಈ ಕಾರ್ಖಾನೆಗೆ ಮೈಸೂರು ಸ್ಯಾಂಡಲ್ ಸೋಪ್ ಎಂದು ಹೆಸರಿಸಿದ್ದು, ಹಿಂದಿನ ಮೈಸೂರು ಇಂದಿನ ಕರ್ನಾಟಕವಾಗಿದೆ. ಅಂದರೆ ಒಂದು ರಾಜ್ಯದ ಅಸ್ಮಿತೆಯಾಗಿ ತನ್ನ ಪಾರಂಪರಿಕತೆಯನ್ನು ಉಳಿಸಿಕೊಂಡು ಬಂದಿದೆ. ಈ ಉತ್ಪನ್ನವನ್ನು ಕರ್ನಾಟಕದ ಜನತೆಯು ಅನೇಕ ವರ್ಷಗಳಿಂದ ನಮ್ಮ ಮನೆಯ ಉತ್ಪನ್ನ ಎಂದು ಭಾವಿಸಿ ಬಳಸುತ್ತಿದ್ದಾರೆ. ಈ ಸಂಸ್ಥೆಗೆ ರಾಯಭಾರಿಯನ್ನು ಮಾಡಲೇಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದ್ದರೆ ಕನ್ನಡದ ಜನಪ್ರಿಯ ಹಾಗೂ ಪ್ರತಿಭಾವಂತ ನಟಿಯರನ್ನು ನೇಮಿಸಿಕೊಳ್ಳಬೇಕಾಗಿತ್ತು. ತಮನ್ನಾ ಭಾಟಿಯಾಗೆ ಮಣೆ ಹಾಕುವ ಮೂಲಕ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ತಮನ್ನಾ ಭಾಟಿಯಾ ಕರ್ನಾಟಕದ ಸಂಸ್ಕೃತಿ, ಇತಿಹಾಸದೊಂದಿಗೆ ಯಾವುದೇ ನಂಟು ಹೊಂದಿಲ್ಲ. ಕನ್ನಡತನದ ಗಂಧ ಗಾಳಿ ಗೊತ್ತಿಲ್ಲದ ಈ ನಟಿಯನ್ನು ನಮ್ಮ ಗಂಧದದ ಸೋಪಿನ ಸಂಸ್ಥೆಗೆ ರಾಯಭಾರಿ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಈ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಕನ್ನಡಿಗರ 6.20 ಕೋಟಿ ರೂ. ಅನ್ನು ಉಳಿಸಲಿ ಎಂದಿದ್ದಾರೆ.