ಚಿಕ್ಕಬಳ್ಳಾಪುರ : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಶಾಂತಿಯುತವಾಗಿ ಮುಕ್ತಾಯವಾಗಿದೆ.
ಬಿಜೆಪಿ ಬೆಂಬಲಿತ ಚಿದಾನಂದಗೌಡ, ಕಾಂಗ್ರೆಸ್ ಬೆಂಬಲಿತ ರಮೇಶ್ ಬಾಬು, ಜೆಡಿಎಸ್ ಬೆಂಬಲಿತ ಚೌಡರೆಡ್ಡಿ ತೂಪಲ್ಲಿ ಸೇರಿ ಕಣದಲ್ಲಿರುವ ಇತರ ಅಭ್ಯರ್ಥಿಗಳ ಸೋಲು ಗೆಲುವಿನ ಹಣೆಬರಹ ಬರೆಯುವ ಚುನಾವಣೆಗೆ ಜಿಲ್ಲಾದ್ಯಂತ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಅಧಿಕಾರಿಗಳು ಮತ ಚಲಾವಣೆಯ ಅಣಕು ಪ್ರದರ್ಶನದೊಂದಿಗೆ ಬೆಳಗ್ಗೆ 8ಕ್ಕೆ ಮತದಾನ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಂತೆ ಮತದಾರರು ಸರದಿಯಲ್ಲಿ ಬಂದು ಮತ ಚಲಾಯಿಸಿದರು. ಬೆಳಗ್ಗೆ 9 ರವರೆಗೆ ಜನರ ಸಂಖ್ಯೆ ಕಡಿಮೆ ಇತ್ತು. ಬಳಿಕ ಮತದಾನ ಪ್ರಮಾಣ ಹೆಚ್ಚಾಯಿತು. ಮತಗಟ್ಟೆಗಳಲ್ಲಿ ಲೋಪಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಕೇಳಿ ಬರಲಿಲ್ಲ. ಪ್ರತಿ ಮತಗಟ್ಟೆ ಬಳಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಕೊನೇ ಕ್ಷಣದವರೆಗೂ ಮನವೊಲಿಕೆ : ಪ್ರತಿ ಮತಗಟ್ಟೆ ಬಳಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಟೇಬಲ್ ಹಾಕಿಕೊಂಡು ಕುಳಿತಿದ್ದರು. ಕೇಂದ್ರಕ್ಕೆ ಆಗಮಿಸಿದ ಮತದಾರರನ್ನು ಸೆಳೆಯಲು ಕೊನೇ ಕ್ಷಣದವರೆಗೂ ಕಸರತ್ತು ನಡೆಸಿದರು. ಸ್ಥಳೀಯ ಕಾರ್ಯಕರ್ತರು ಮೊಬೈಲ್ ಕರೆ ಮಾಡಿ, ಪರಿಚಿತ ಮತದಾರರನ್ನು ಕರೆಸಿಕೊಳ್ಳುತ್ತಿದ್ದರು. ಕರೊನಾ ಮುಂಜಾಗ್ರತಾ ಕ್ರಮಗಳ ಪಾಲನೆಯಲ್ಲಿ ನಿರ್ಲಕ್ಷೃ ಕಂಡು ಬಂತು. ಸೋಂಕಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಸೇರಿತ್ತು.
ಪ್ರಮುಖರ ಮತ ಚಲಾವಣೆ : ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ಗೌರಿಬಿದನೂರಿನಲ್ಲಿ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಸೇರಿ ಹಲವರು ಮತ ಚಲಾಯಿಸಿದರು.
ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ: ಸರ್ಕಾರಿ ಪ್ರೌಢಶಾಲೆ ಸೇರಿ ವಿವಿಧೆಡೆ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ಕರೊನಾ ಮುಂಜಾಗ್ರತಾ ಕ್ರಮಗಳ ಪಾಲನೆ, ಭದ್ರತೆ, ಸರದಿ ಸಾಲಿನಲ್ಲಿ ಮತದಾರರು, ಮತ ಚಲಾವಣೆ, ಮತದಾರ ಪಟ್ಟಿ ಪರಿಶೀಲನೆ, ಸಿಬ್ಬಂದಿ ಮತ್ತು ಏಜೆಂಟ್ ಕಾರ್ಯ ನಿರ್ವಹಣೆ ಸೇರಿ ಮತಗಟ್ಟೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾದ್ಯಂತ ಚುನಾವಣೆ ಶಾಂತಿಯುತ, ಸುಗಮವಾಗಿ ನಡೆದಿದೆ. ಎಲ್ಲೂ ಲೋಪಗಳು ಕಂಡು ಬಂದಿಲ್ಲ. ಮತದಾನ ಮುಗಿದ ಬಳಿಕ ನಿಯಮಾನುಸಾರ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್‌ಗೆ ಸಾಗಿಸಲಾಗುತ್ತದೆ ಎಂದು ತಿಳಿಸಿದರು. ತಹಸೀಲ್ದಾರ್ ನಾಗಪ್ರಶಾಂತ್ ಮತ್ತಿತರರು ಇದ್ದರು.