ನ್ಯೂಸ್

ಪತ್ರಿಕೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸಬೇಕು: ಅಂಶಿ ಪ್ರಸನ್ನಕುಮಾರ್

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಪತ್ರಿಕೋದ್ಯಮ ನಿರಂತರ ಕೆಲಸಮಾಡುತ್ತಿದೆ ಈ ನಿಟ್ಟಿನಲ್ಲಿ ಪತ್ರಿಕೆಗಳು ಸ್ಪಂದಿಸಬೇಕು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮೂರು  ದಿನಗಳ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ 'ಕನ್ನಡ ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿ ಗತಿ" ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪತ್ರಿಕೆಗಳು ಸಂಗಾತಿಗಳಿದ್ದ ಹಾಗೆ, ನೈತಿಕತೆ ಉಳಿಸಿಕೊಂಡರೆ ಜನರು ಇವತ್ತಿನ ಸಾಮಾಜಿಕ ಜಾಲತಾಣಗಳ ನಡುವೆಯೂ ಪತ್ರಿಕೆಗಳನ್ನು ಓದುತ್ತಾರೆ , ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡಬೇಕು ಎಂದರು.

ಇವತ್ತಿನ ದಿನ ಪತ್ರಕರ್ತರು ರಾಜಕಾರಣಿಗಳಲ್ಲಿ ಅಭಿವೃದ್ಧಿ ವಿಚಾರಗಳ ಕುರಿತು ಪ್ರಶ್ನೆಗಳನ್ನು ಕೇಳುವುದಿಲ್ಲ, ಬದಲಾಗಿ ಜಗಳ ಹುಟ್ಟು ಹಾಕುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ, ಇದು ನಿಜವಾದ ಪತ್ರಿಕೋದ್ಯಮ ಅಲ್ಲ" ಎಂದರು.

ಇನ್ನು ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳ ಕುರಿತು  ಜನ ಟಿವಿಗಳಲ್ಲಿ ಪ್ರಸಾರಮಾಡುವ ಸುದ್ದಿಗಳಿಗಿಂತ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು  ಹೆಚ್ಚು ಮೆಚ್ಚುತ್ತಾರೆ, ಸುದ್ದಿ ವಾಹಿನಿಗಳು ಟಿ.ಆರ್.ಪಿ ಗೋಸ್ಕರ  ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳ ಹಿಂದೆ ಬಿದ್ದಿವೆ." ಎಂದರು

ಪತ್ರಿಕೆಗಳ ಪ್ರಸ್ತುತ ಸ್ಥಿತಿಗತಿ ಕುರಿತು "ಪತ್ರಿಕೆಗಳಲ್ಲಿ ಮುಂಚೆ ಓದುಗರೆ ಬಂಧುಗಳಾಗಿದ್ದರು, ಓದುಗರಿಗೆ ಏನು ಬೇಕು ಅದನ್ನ ಕೊಡುತ್ತೇವೆ ಎನ್ನುತ್ತಿದ್ದವು ಪತ್ರಿಕೆಗಳು,ಈಗ ನಾವೇನು ಕೊಡುತ್ತೀವೋ ಅದನ್ನೇ ಓದಿ ಎನ್ನುತ್ತಿವೆ ಎಂದರು.

ಹಿಂದೆ ಮೊದಲ ಪುಟದಲ್ಲಿ ಜಾಹೀರಾತುಗಳನ್ನು ಹಾಕುತ್ತಿರಲಿಲ್ಲ. ಈಗ ಜಾಹಿರಾತುಗಳಿಲ್ಲದೆ  ಪತ್ರಿಕೆಗಳೇ ನಡೆಯಲ್ಲ ಎಂಬ ಸ್ಥಿತಿ ಬಂದಿದೆ" ಮುಂದುವರೆದು "ಕನ್ನಡ ಪತ್ರಿಕೆಯಲ್ಲಿ ಇತ್ತೀಚಿಗೆ ಅನಾರೋಗ್ಯಕರ ಪೈಪೋಟಿ ಹುಟ್ಟಿಕೊಂಡಿದೆ" ಎಂದರು.

ಕನ್ನಡ ಪತ್ರಿಕೆಗಳ ಇತ್ತೀಚಿನ ಬೆಳವಣಿಗೆ ಕುರಿತು " ಕನ್ನಡ ಪತ್ರಿಕೆಗಳಲ್ಲಿ ಇಂದು ಹೊಸ ತಂತ್ರಜ್ಞಾನ ಬಂದಿದೆ. ಎಲ್ಲಾ ಪತ್ರಿಕೆಗಳು ಡಿಜಿಟಲ್ ಆಗಿ ಆನ್ಲೈನ್ ನಲ್ಲೂ ಸಕ್ರಿಯವಾಗಿವೆ. ಸಾಕಷ್ಟು ಹೊಸ ಪತ್ರಿಕೆಗಳು ಹುಟ್ಟಿಕೊಂಡಿವೆ" ಎಂದು ಹೇಳಿದರು

"ಜಾಹೀರಾತಿನ ಆದಾಯ ಕಡಿಮೆ ಆಗ್ತಾ ಇರೋದ್ರಿಂದ ಪತ್ರಿಕೆಗಳು ಬೇರೆ ಬೇರೆ ಆದಾಯ ಮೂಲಗಳನ್ನು ಹುಡುಕುತ್ತಾ  ಇವೆ. ಹಿಂದೆ ಮುದ್ರಣ ಮಾಧ್ಯಮ ತುಂಬಾ ಅನಿವಾರ್ಯವಾಗಿತ್ತು" ಎಂದು ಹೇಳಿದರು.

ಮಾಧ್ಯಮ ರಂಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಮಾಧ್ಯಮಗಳಲ್ಲಿ ಕೆಲಸಕ್ಕೆ ಹೋದರೆ ನಿಮ್ಮ ಅಂಕಗಳನ್ನ ಕೇಳಲ್ಲ, ಎಷ್ಟು ಲೇಖನಗಳನ್ನ ಬರೆದಿದ್ದೀರ ಅಂತಾರೆ. ಹಾಗಾಗಿ ಬರವಣಿಗೆ ತುಂಬಾ ಮುಖ್ಯ" ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು