ನ್ಯೂಸ್

ಪತ್ನಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

ಮಚ್ಚಿನಿಂದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಮೈಸೂರಿನ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪತ್ನಿ ಪಂಕಜಾಳನ್ನು ಕೊಲೆ ಮಾಡಿದ್ದ ಹುಣಸೂರು ತಾಲೂಕಿನ ಅತ್ತಿಗುಪ್ಪೆ ಗ್ರಾಮದ ನಿವಾಸಿ ಲವ ಕುಮಾರ ಶಿಕ್ಷೆಗೆ ಗುರಿಯಾದವ.

ಏನಿದು ಪ್ರಕರಣ?: ಈತ ಕೆ.ಆರ್.ನಗರ ತಾಲೂಕಿನ ನಾರಾಯಣಪುರದ ಪಂಕಜಾಳನ್ನು 14 ವರ್ಷಗಳ ಹಿಂದೆ ವಿವಾಹವಾಗಿದ್ದ. ಆಕೆಯ ಬಗ್ಗೆ ಅನುಮಾನಪಟ್ಟು ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಮಾಡಲಾಗಿತ್ತು. ನಾಲ್ಕು ವರ್ಷದ ಹಿಂದೆ ಈತನ ತಂದೆ ಕೃಷ್ಣೇಗೌಡ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರದ ಕಾರ್ಯ ನಡೆಸುವ ವೇಳೆ ಪಂಕಜಾ ತನ್ನ ತಂದೆ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೋಪಗೊಂಡು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಣಸೂರು ಪಟ್ಟಣ ಠಾಣೆ ಪೊಲೀಸರು, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್, ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಬಿ.ಇ.ಯೋಗೇಶ್ವರ ವಾದ ಮಂಡಿಸಿದ್ದರು.