ಚಂದ್ರು. 
ನ್ಯೂಸ್

ಪತ್ನಿ ಅನಾರೋಗ್ಯಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಮೂಡಿಗೆರೆ: ಮಹಿಳೆಯೊಬ್ಬರು ಹೃದಯ ಸಂಬಂಧಿ ಕಾಯಿಲೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾರಣ ಅವರಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ನೊಂದು ಪತಿ ಗುರುವಾರ ಬಿದರಹಳ್ಳಿ ಗ್ರಾಮದ ಕುಶಾಲನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರು (52) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಚಂದ್ರು ಅವರು ಪತ್ನಿಯ ಅನಾರೋಗ್ಯದಿಂದ ಖಿನ್ನತೆಗೊಳಗಾಗಿದ್ದರು. ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಅವರಿಗೆ ಕುಟುಂಬದಲ್ಲಿ ಬೇರೆ ಯಾರೂ ಇಲ್ಲದಿದ್ದರಿಂದ ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಪದಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಂತರ ಪೊಲೀಸರ ನೆರವಿನೊಂದಿಗೆ ಹಿಂದು ಸಂಪ್ರದಾಯದಂತೆ ಬೀಜುವಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದರು.

ಅಂತ್ಯಕ್ರಿಯೆ ನಡೆಸಿದ ಬಳಿಕ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಅಧ್ಯಕ್ಷ ಫಿಶ್ ಮೋಣು ಮಾತನಾಡಿ, ಅಪರಿಚಿತ ಶವಗಳು ಮತ್ತು ಬೀದಿಬದಿಯಲ್ಲಿ ತಿರುಗಾಡುತ್ತಿರುವವರು ಮೃತಪಟ್ಟರೆ ಸಾರ್ವಜನಿಕರು ನಮ್ಮ ಸಂಸ್ಥೆಗೆ ಕರೆ ಮಾಡುತ್ತಾರೆ. ನಾವು ಸ್ಥಳಕ್ಕೆ ತೆರಳಿ ಪೊಲೀಸರು, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಅವರವರ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುತ್ತೇವೆ. 25 ವರ್ಷದಿಂದ ಸಾಮಾಜಿಕ ಸೇವೆ ನಡೆಸುತ್ತಾ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದೇವೆ ಎಂದು ತಿಳಿಸಿದರು. ಸಮಾಜಸೇವಕ ಅಬ್ದುಲ್ ರಹಿಮಾನ್ ಇದ್ದರು.