ಹುಣಸೂರು: ಇತ್ತೀಚೆಗೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಗರದ ಸಂವಿಧಾನ ವೃತ್ತದಲ್ಲಿ ಗುರುವಾರ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ಜಯಕಾರ ಮೊಳಗಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದ ಸ್ಪಷ್ಟ ನಿದರ್ಶನ ಇದಾಗಿದ್ದು, ಕೇಂದ್ರ ಸರ್ಕಾರದ ಜನಪರ ಮತ್ತು ಅಭಿವೃದ್ಧಿಪರ ಯೋಜನೆಗಳೇ ಇದಕ್ಕೆ ಮೂಲ ಕಾರಣವೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಯೋಗಾನಂದ ಕುಮಾರ್ ಮಾತನಾಡಿ, ತ್ರಿಪುರ ರಾಜ್ಯದಲ್ಲಿ ಪಕ್ಷ ಸ್ವಂತಶಕ್ತಿಯಿಂದ ಅಧಿಕಾರದ ಗದ್ದುಗೆ ಹಿಡಿದಿದೆ. ಮಿಕ್ಕ ಎರಡು ರಾಜ್ಯಗಳಲ್ಲಿ ಮೈತ್ರಿಕೂಟದ ಶಕ್ತಿಯ ಮೂಲಕ ಅಧಿಕಾರ ಪಡೆದಿದೆ. ಹಳಸಲು ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಅನ್ನು ಜನತೆ ಸ್ಪಷ್ಟವಾಗಿ ತಿರಸ್ಕರಿಸಿ ಮೂಲೆಗುಂಪಾಗಿಸಿರುವುದು ಈ ಚುನಾವಣೆಯಿಂದ ಸ್ಪಷ್ಟಗೊಂಡಿದೆ ಎಂದರು.
ಮುಖಂಡರಾದ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅಣ್ಣಯ್ಯನಾಯ್ಕ, ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್‌ಕುಮಾರ್, ಹನಗೋಡು ಮಂಜುನಾಥ್, ಗೋವಿಂದನಾಯ್ಕ, ಸೂರ್ಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ಯಶೋದಮ್ಮ, ಮಂಗಳಮ್ಮ ಇತರರು ಇದ್ದರು.