ನ್ಯೂಸ್

ಪಕ್ಷದೊಳಗೂ ವಕ್ಫ್ ತಾಪ, ಲಗಾಮು ಹಾಕಲು ಒತ್ತಾಯ

ಬೆಂಗಳೂರು: ವಕ್ಫ್ ವಿವಾದ ಹಾಗೂ ಚುನಾವಣೆ ಪ್ರಚಾರದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಬಳಸಿದ ಪದ ಬಳಕೆ ಬಗ್ಗೆ ಕಾಂಗ್ರೆಸ್‌ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕೆಂದು ಹೈಕಮಾಂಡ್‌ಗೂ ದೂರು ಸಲ್ಲಿಕೆಯಾಗಿದೆ.

ಪಕ್ಷದ ಪದಾಧಿಕಾರಿಗಳೇ ತೀವ್ರ ಅಸಮಾಧಾನ ಹೊರಹಾಕಿದ್ದು, ಈಗ ಜಮೀರ್ ಅಹ್ಮದ್ ಅವರನ್ನು ನಿಯಂತ್ರಿಸದೇ ಹೋದರೆ ಪಕ್ಷಕ್ಕೆ ಹಿನ್ನೆಡೆಯಾಗಲಿದೆ ಎಂದು ಎಚ್ಚರಿಸಿದ್ದಾರೆ. ಶೀಘ್ರವೇ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷರ ಬಳಿ ದೂರು ನೀಡಲು ತಯಾರಿ ಕೂಡ ನಡೆದಿದೆ.

ನಿರ್ಣಾಯಕ ರಾಜಕೀಯ ಸಂದರ್ಭಗಳಲ್ಲಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ವಸತಿ ಸಚಿವ ಜಮೀರ್ ಅಹಮದ್ ಮೇಲೆ ಪಕ್ಷ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಹಾಗೆಯೇ ಜಮೀರ್ ಅಹಮದ್ ಮುಂದೆಯು ಬೇಜವಾಬ್ದಾರಿ ರಹಿತವಾಗಿ ಹೇಳಿಕೆಗಳನ್ನು ಕೊಡಬಾರದೆಂದು ಎಚ್ಚರಿಕೆಯನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ. ಸಚಿವ ಸ್ಥಾನದ ಘನತೆ ಮತ್ತು ಹಕ್ಕುಬದ್ದತೆಯ ಜವಾಬ್ದಾರಿಯನ್ನು ಅರಿತುಕೊಳ್ಳದ ಜಮೀರ್ ಅಹಮದ್ ಅವರಿಂದ ಪಕ್ಷಕ್ಕಾಗಲೀ, ಸರ್ಕಾರಕ್ಕಾಗಲೀ ಯಾವುದೇ ಲಾಭವಾಗದೇ ಕೇವಲ ನಷ್ಟವಾಗುತ್ತಿದೆ ಎಂಬುದನ್ನು ಪಕ್ಷದ ಮುಖಂಡರು ಮನದಟ್ಟು ಮಾಡಿಕೊಳ್ಳಬೇಕು. ಇವರ ನಡುವಳಿಕೆಗೆ ತಕ್ಷಣವೇ ಲಗಾಮು ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೋಡೆತ್ತುಗಳಂತೆ ಶ್ರಮಿಸುತ್ತಾ ಸರ್ಕಾರವನ್ನು ಮತ್ತು ಪಕ್ಷವನ್ನು ದಕ್ಷತೆಯಿಂದ ಮುನ್ನಡೆಸುತ್ತಿದ್ದಾರೆ. ಜಾತ್ಯತೀತ ಮನೋಭಾವನೆಗಳಿಗೆ ಮತ್ತು ಮಾನವೀಯ ಧರ್ಮ- ಸಂಹಿತೆಗೆ ಧಕ್ಕೆಯಾಗದಂತೆ ಸರ್ವರನ್ನು ಅಪ್ಪಿಕೊಂಡು ಮುನ್ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಸಚಿವ ಜಮೀರ್ ಅಹಮದ್ ಅಮಾನವೀಯ ಹೇಳಿಕೆಗಳನ್ನು ನೀಡುತ್ತಾ, ವಿವಾದಗಳನ್ನು ಹುಟ್ಟು ಹಾಕುತ್ತಾ ಮುನ್ನಡೆಯುತ್ತಿರುವುದು ಕೆಟ್ಟ ವಾತಾವರಣವನ್ನು ಸೃಷ್ಟಿಸಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಉಪ ಚುನಾವಣೆಯ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ನೀಡಿದ ಹೇಳಿಕೆಗಳು ಮತ್ತು ಸೃಷ್ಟಿಸಿದ ವಿವಾದಗಳಿಂದ ಪಕ್ಷದ ಮೇಲೆ ದುಷ್ಪರಿಣಾಮ ಬೀರಿರುವುದಂತೂ ಸ್ಪಷ್ಟ ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಅದರ ಪರಿಣಾಮವನ್ನು ಜಮೀರ್ ಅಹಮದ್ ಅವರೆ ಎದುರಿಸಬೇಕಾಗುತ್ತದೆ. ರಾಜಕೀಯ ಬೌದ್ಧಿಕತೆ ಕಳೆದುಕೊಂಡಿರುವ ಇಂತಹವರನ್ನು ಪಕ್ಷ ಮತ್ತು ಸರ್ಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸುವುದನ್ನು ಕೈಬಿಟ್ಟರೆ ಕ್ಷೇಮ ಎಂದು ಎಚ್ಚರಿಸಿದ್ದಾರೆ.

ಪಕ್ಷದ ಉಪಾಧ್ಯಕ್ಷರೂ ಆಗಿರುವ ಎ.ಆರ್.ಎಂ.ಹುಸೇನ್ ಅವರು ತಮ್ಮ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲಿ ಹೊರಹಾಕಿದ್ದು, ಜಮೀರ್ ಅಹ್ಮದ್‌ಗೆ ಲಗಾಮು ಹಾಕಿ ಎಂದು ಒತ್ತಾಯಿಸಿದ್ದಾರೆ.