ನ್ಯೂಸ್

ಪಕ್ಷ ಸೇರಿದವರಿಗೆ ಬೆಂಬಲ, ರಕ್ಷಣೆ

ಹೊಳೆನರಸೀಪುರ: ಜೆಡಿಎಸ್ ದಬ್ಬಾಳಿಕೆಗೆ ಒಳಗಾಗಿ ತುಳಿಯಲ್ಪಟ್ಟಿರುವ ತಾಲೂಕಿನ ಮುಖಂಡರು ನಿರ್ಭಯವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ನಮ್ಮ ಪಕ್ಷ ಎಲ್ಲ ರೀತಿಯ ಬೆಂಬಲ, ಸಹಕಾರ ಮತ್ತು ರಕ್ಷಣೆ ನೀಡುತ್ತದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಸಂಸದ, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಿ.ಕೆ.ಸುರೇಶ್ ಭರವಸೆ ನೀಡಿದರು.

ಮಾಜಿ ಪುರಸಭೆ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಅವರ ಮನೆಯ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರ ದಬ್ಬಾಳಿಕೆ, ದೌರ್ಜನ್ಯ ಮಿತಿ ಮೀರಿದ್ದರೂ, ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಇರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಆದ್ದರಿಂದ ಹೊಳೆನರಸೀಪುರ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ತಾಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ ತಮ್ಮ ಕಪಿಮುಷ್ಠಿಯಲ್ಲಿ ಪೊಲೀಸ್, ಕಂದಾಯ, ಪುರಸಭೆ ಇಲಾಖೆಗಳನ್ನು ಇಟ್ಟುಕೊಂಡು ನಾಗರಿಕರಿಗೆ ಜೆಡಿಎಸ್ ನಾಯಕರು ಅನ್ಯಾಯ ಮಾಡುತ್ತಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಲು ನಿರ್ಭಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ಬೆಂಬಲಿಸಿ ಗೆಲುವಿಗೆ ಕಾರಣರಾಗಿ ಎಂದರು.

ಮಾಟ ಮಂತ್ರ, ನಿಂಬೆಹಣ್ಣು ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ, ಅವರಿಗೆ ತಿರುಗುಬಾಣವಾಗಲಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಅವರನ್ನು ಕುರಿತು ಪರೋಕ್ಷವಾಗಿ ಹರಿಹಾಯ್ದರು. ನಮ್ಮೆಲ್ಲ ಕಾರ್ಯಕರ್ತರು ನಿಮಿಷಾಂಬ ದೇವಿಗೆ ನಿಂಬೆಹಣ್ಣು ಅರ್ಪಿಸಿ ಬಿಡಿ, ನಿಂಬೆಹಣ್ಣು ಮಂತ್ರದವರಿಗೆ ತಿರುಗು ಬಾಣವಾಗಲಿ ಎಂದು ವ್ಯಂಗ್ಯವಾಡಿದರು.

ಜಿಲ್ಲೆ, ತಾಲೂಕಿನ ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ, ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ತಾಲೂಕಿನಲ್ಲಿ ಹಿಂದೆ ಸಾವಿರಾರು ಗುತ್ತಿಗೆದಾರರು ಇದ್ದು ಅವರೆಲ್ಲ ಕಾಣೆಯಾಗಿದ್ದಾರೆ. ಆದರೆ ಮೂವರು ಮಾತ್ರ ಕಾಮಗಾರಿಗಳ ಗುತ್ತಿಗೆಯನ್ನು ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ ಎಂದು ಶಾಸಕರ ಕುಟುಂಬವನ್ನು ಕುರಿತು ಪರೋಕ್ಷವಾಗಿ ಟೀಕಿಸಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಸುಮಾರು 35 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ಮಾಜಿ ಪುರಸಭೆ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಅವರನ್ನು ಪಕ್ಷದ ಚಿಹ್ನೆ ಇರುವ ಬಾವುಟವನ್ನು ಹಸ್ತಾಂತರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಚಂದ್ರಶೇಖರ್, ಓಲೆ ಕುಮಾರ್, ಸತೀಶ್ ಗುರು ಲೋಕೇಶ್ ಸೇರಿದಂತೆ ನೂರಾರು ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಬರ ಮಾಡಿಕೊಂಡರು.

ಕಾರ್ಯಕ್ರಮಕ್ಕೂ ಮೊದಲು ಸಂಸದ ಡಿಕೆ ಸುರೇಶ್ ಸಾವಿರಾರು ಕಾರ್ಯಕರ್ತರೊಡಗೂಡಿ ಮೆರವಣಿಗೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ.ಎಚ್.ಲಕ್ಷ್ಮಣ್ , ಜಿ.ಪಂ. ಮಾಜಿ ಸದಸ್ಯ ಶ್ರೇಯಸ್ ಎಂ.ಪಟೇಲ್, ಬಾಗೂರು ಮಂಜೇಗೌಡ, ಶ್ರೀಧರ್‌ಗೌಡ, ಸುರೇಶ್, ಹೊನ್ನಿಕೊಪ್ಪಲು ಮಂಜೇಗೌಡ, ಬಾಗಿವಾಳು ಮಂಜೇಗೌಡ, ವಿಶ್ವನಾಥ್ ಇತರರಿದ್ದರು.