ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಎನ್.ನರಸಿಂಹಸ್ವಾಮಿ, ರವಿಕುಮಾರ್, ಸಂಜುಗೌಡ ಇದ್ದರು
ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ಹಾಗೂ ಚಾಮುಂಡೇಶ್ವರಿ ಅನುಗ್ರಹ ಪಡೆದು ಪಂಚರತ್ನ ರಥಯಾತ್ರೆಗೆ ಮುಂದಾಗುತ್ತಿದ್ದು, 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮೈಸೂರಿನಲ್ಲಿ ಸಮಾರೋಪ ಸಮಾರಂಭ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರತ್ನ ರಥಯಾತ್ರೆಯನ್ನು ನ. 1ರಿಂದಲೇ ಪ್ರಾರಂಭ ಮಾಡಬೇಕಿತ್ತು. ಆನಂತರ ನ.14ಕ್ಕೆ ಮುಂದೂಡಿಕೆಯಾಗಿತ್ತು. ಹವಾಮಾನ ವೈಪರೀತ್ಯದಿಂದ ನ. 18ಕ್ಕೆ ನಿಗದಿ ಮಾಡಿದ್ದೇವೆ. ಯಾತ್ರೆ ಕೈಗೊಳ್ಳುವ ಮುನ್ನ ಶ್ರೀಕಂಠೇಶ್ವರಸ್ವಾಮಿ ಹಾಗೂ ಚಾಮುಂಡೇಶ್ವರಿ ಅನುಗ್ರಹ ಪಡೆದು ಆರಂಭಿಸಲು ನಿಶ್ಚಯಿಸಿದ್ದೇನೆ ಎಂದು ಹೇಳಿದರು.
ಮುಳಬಾಗಿಲಿನಿಂದ ಆರಂಭವಾಗುವ ಪಂಚರತ್ನ ರಥಯಾತ್ರೆಯು ಪ್ರತಿದಿನ ಒಂದು ಕ್ಷೇತ್ರದಲ್ಲಿ ಪ್ರವಾಸ ಮಾಡಲಿದೆ. ಕ್ಷೇತ್ರ ವ್ಯಾಪ್ತಿಯ 30 ಗ್ರಾಮಗಳಿಗೆ ಭೇಟಿ ನೀಡಲಿದ್ದೇನೆ. ಮೂರು ತಿಂಗಳ ಕಾಲ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಾರ್ಚ್ 15ರ ನಂತರ ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ. ಯಾತ್ರೆ ಸಮಾರೋಪಗೊಳ್ಳುವ ವೇಳೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಒಂದೇ ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂಬ ಆಶಾಭಾವನೆ ಜನರಲ್ಲಿ ಮೂಡಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಮೇಯರ್ ರವಿಕುಮಾರ್, ಮುಖಂಡರಾದ ಬೆಳವಾಡಿ ಶಿವಕುಮಾರ್, ಸಂಜುಗೌಡ ಇತರರು ಇದ್ದರು.