ಹಾಸನ: ಚುನಾವಣೆ ಪೂರ್ವದಲ್ಲಿ ಕೊಟ್ಟಂತಹ ಐದು ಗ್ಯಾರಂಟಿ ಭರವಸೆ ಈಗ ಪಂಚರ್ ಆಗಿವೆ ಎಂದು ಎಂಎಲ್‌ಸಿ ಸಿ.ಟಿ.ರವಿ ಅವರು ಹೇಳಿದರು.
ಶುಕ್ರವಾರ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನಾಭಿಪ್ರಾಯ ಸಾರ್ವತ್ರಿಕವಾಗಿ ಈ ಕಾಂಗ್ರೆಸ್ ಸರ್ಕಾರದ ಪರ ಇರುವುದಿಲ್ಲ. ಪಂಚ ಗ್ಯಾರೆಂಟಿಗಳು ಪಂಚರ್ ಆಗಿಬಿಟ್ಟಿವೆ. ಜನರಿಗೆ ಚುನಾವಣೆ ಪೂರ್ವದಲ್ಲಿ ಕೊಟ್ಟ ಪಂಚ ಗ್ಯಾರೆಂಟಿಗಳು ಈಗ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಮೂರು ಸಾವಿರ ರೂ. ಕೊಡುತ್ತೇವೆ ಎಂದು ಹೇಳಿ ಇವತ್ತಿನವರೆಗೂ ಮೂರು ಸಾವಿರ ರೂ. ನೀಡಿಲ್ಲ. ಜನರಿಗೆ ಮೂರು ನಾಮ ಹಾಕಿದ್ದಾರೆ ಎಂದು ಆರೋಪಿಸಿದರು.
ಪ್ರತಿ ಕುಟುಂಬದ ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುತ್ತೇವೆ ಎಂದರು. ಈಗ ಆ ಹಣ ಒಂದು ತಿಂಗಳು ಬಂದರೆ ಎರಡು ತಿಂಗಳು ಬರುವುದೇ ಇಲ್ಲ. ಈ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ನನಗೆ ಇರುವ ಮಾಹಿತಿ ಪ್ರಕಾರ 20 ರಿಂದ 25 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಯೋಜನೆ ಮಾಡಿದ್ದಾರೆ ಎಂದು ದೂರಿದರು.
ಮನೆಗೆ 200 ಯೂನಿಟ್‌ವರೆಗೂ ವಿದ್ಯುತ್ ಫ್ರೀ ಎಂದು ಹೇಳಿ ಈಗ 12 ಯೂನಿಟ್ ಬಳಕೆ ಮಾಡುತ್ತಿದ್ದವನು 20 ಯೂನಿಟ್ ಬಳಕೆ ಮಾಡಿದರೆ ಡಬಲ್ ಬಿಲ್ ಬರುತ್ತಿದೆ. ಫ್ರೀ ಎಲ್ಲಿ ಇದೆ. ಶಕ್ತಿ ಯೋಜನೆ ನಿಶ್ಯಕ್ತವಾಗಿದೆ ಅಂತ ಉಪಮುಖ್ಯಮಂತ್ರಿಗಳೇ ಹೇಳಿದ್ದಾರೆ. ಶಕ್ತಿ ಯೋಜನೆ ನೆಪದಲ್ಲಿ ಇದ್ದ ರೂಟ್‌ಗಳನ್ನು ಕಡಿತಗೊಳಿಸಿದ್ದಾರೆ. 10 ಕೆಜಿ ಅಕ್ಕಿ ಎಂದರು ಎಲ್ಲೂ ಹತ್ತು ಕೆಜಿ ಅಕ್ಕಿ ಕೊಡುತ್ತಿಲ್ಲ. ಅಕ್ಕಿ ಬದಲಿಗೆ ಹಣ ಕೊಡುತ್ತೇವೆ ಎಂದು ಹೇಳಿದರು. ಆ ಹಣವೂ ತಲುಪುತ್ತಿಲ್ಲ. ಇದು ಪಂಚ ಗ್ಯಾರೆಂಟಿಗಳು ಪಂಚರ್ ಆಗಿರುವುದಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದರು.
ಈ ಬಗ್ಗೆ ಅವರದ್ದೇ ಪಕ್ಷದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂತ್ರಿಗಳು ಅಸಹನೆ ತೋಡಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಹಣ ಬಲ, ಅಧಿಕಾರ ಬಲ ಕಾಂಗ್ರೆಸ್ ಮಾತ್ರ ಕಾಂಗ್ರೆಸ್‌ನಲ್ಲಿ ಇರುವುದು. ಆದರೆ ಎನ್‌ಡಿಎಗೆ ಜನ ಬಲ ಮಾತ್ರ. ನನಗೆ ವಿಶ್ವಾಸವಿದೆ ಎಷ್ಟೋ ಸರಿ ಉಪಚುನಾವಣೆ ನಡೆದಾಗ ಹಣ, ಅಧಿಕಾರ ಬಲ ಸೋತಿದೆ. ಇಲ್ಲೂ ಅಧಿಕಾರ, ಹಣದ ಬಲ ಸೋಲಬೇಕು. ಹಾಗೆ ಸೋಲಲಿದೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ವಕ್ಫ್ ವಿವಾದದ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಉಪಚುನಾವಣೆಗಾಗಿ ವಿವಾದ ಮಾಡುತ್ತಿದ್ದಾರೆ ಅಂತ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ ಅವರ ಸಂಪುಟದ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ರೈತರಿಗೆ ನೋಟಿಸ್ ನೀಡಲಾಗಿದೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಅವರೇ ಹೇಳಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತಿರುವುದು ಮುಖ್ಯಮಂತ್ರಿಗಳು. ಎಲ್ಲರಿಗೂ ಮುಖ್ಯಮಂತ್ರಿ ಆಗಿರಬೇಕು, ಕೆಲವರಿಗೆ ಮಾತ್ರ ಮುಖ್ಯಮಂತ್ರಿ ಆಗಬಾರದು ಎಂದರು.
13ನೇ ಶತಮಾನದ ವಿರಕ್ತ ಮಠವೂ ವಕ್ಫ್ ಪ್ರಾಪರ್ಟಿ ಎಂದು ಘೋಷಣೆ ಮಾಡಿದ್ದಾರೆ. ಕಲ್ಬುರ್ಗಿ ಅಳಂದದಲ್ಲಿ ಬೀರಲಿಂಗೇಶ್ವರ ದೇವಾಲಯವೂ ವಕ್ಫ್ ಪ್ರಪಾರ್ಟಿ ಆಗಿದೆ. ಯಾದಗಿರಿ ಹಿಂದು ಸ್ಮಶಾನವೂ ವಕ್ಫ್ ಪ್ರಪಾರ್ಟಿ ಆಗಿದೆ. ಈ ಎಲ್ಲ ವಿವಾದಕ್ಕೆ ಕಾರಣ ಆಗಿರುವುದು ಕಾಂಗ್ರೆಸ್‌ನ ಮತಾಂಧತೆಯನ್ನು ಪ್ರೋತ್ಸಾಹಿಸಿ ಮತ ಪಡೆಯುವಂತಹ ನೀತಿಯೇ ಆಗಿದೆ. ಸಂವಿಧಾನಕ್ಕಿಂತ ಯಾವುದೂ ದೊಡ್ಡದಿಲ್ಲ. ತಾರತಮ್ಯ ಮಾಡುವಂತಹ ಕೆಲಸವನ್ನು ಮಾಡಬಾರದು. ಹಾಗಾಗಿ ಇಡೀ ವಕ್ಫ್ ಕಾಯ್ದೆಗೆ ಸಮಗ್ರ ರೀತಿಯಲ್ಲಿ ತಿದ್ದುಪಡಿ ಆಗಬೇಕು ಎಂದು ಒತ್ತಾಯಿಸಿದರು.
ಸಚಿವ ಜಮಿರ್ ಅಹಮದ್ ಖಾನ್ ಅವರು ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಒಂದು ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ಕೈ ಬಿಡಬೇಕು. ಮುಖ್ಯಮಂತ್ರಿಗಳೇ ನೀವು ವಕೀಲರಿದ್ದೀರಿ ನೀವೇ ಹೇಳಿ? ಸಂವಿಧಾನಕ್ಕೆ ಮೀರಿದ ಕಾಯ್ದೆ ಇರುವುದನ್ನು ನೀವು ಸಮರ್ಥನೆ ಮಾಡುತ್ತೀರಾ? ನಿಮಗೆ ಷರಿಯಾ ಮುಖ್ಯ ಆಗುತ್ತದೆಯೋ ಅಥವಾ ಸಂವಿಧಾನ ಮುಖ್ಯ ಆಗುತ್ತದೆಯೋ? ಸಂವಿಧಾನವೇ ಮುಖ್ಯ ಎನ್ನುವುದಾದರೆ ಸಂವಿಧಾನದ ಬಗ್ಗೆ ನಿಮ್ಮ ಬದ್ಧತೆತೆ ಪ್ರಕಟಿಸಿ ಎಂದು ಆಗ್ರಹಿಸಿದರು.
ಇದೆ ವೇಳೆ ಶಾಸಕರಾದ ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಇತರರು ಉಪಸ್ಥಿತರಿದ್ದರು.