ದಾವಣಗೆರೆ: ಜಿಲ್ಲಾ ವಿಶ್ವಕರ್ಮ ಸಮಾಜ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜ.1ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಐವರು ಕುಶಲ ಕರ್ಮಿಗಳನ್ನು ಸನ್ಮಾನಿಸಲಾಗುತ್ತದೆ. ಅಲ್ಲದೇ, ನಾಟ್ಯ ಭಾರತಿ ಶಾಸ್ತ್ರೀಯ ಸಂಗೀತ ಕಲಾ ಕೇಂದ್ರದ ಮಕ್ಕಳಿಂದ ಅಮರ ಶಿಲ್ಪಿ ಜಕಣಾಚಾರಿ ನೃತ್ಯ ರೂಪಕ ಪ್ರದರ್ಶನವಿದೆ ಎಂದು ವಿಶ್ವ ಕರ್ಮ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎನ್.ಪೂರ್ವಾಚಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆ ತಾಲೂಕಿನ ಚಿನ್ನ-ಬೆಳ್ಳಿ ಕುಶಲಕರ್ಮಿ ಕೆ.ಶಶಿಧರ, ಹರಿಹರದ ಕುಲುಮೆ ಕಸುಬುದಾರ ಕೃಷ್ಣಾಚಾರ್, ಹೊನ್ನಾಳಿಯ ಲೋಹ ಶಿಲ್ಪಿ ಶಂಕರಾಚಾರ್, ಚನ್ನಗಿರಿಯ ಕಾಷ್ಟ ಶಿಲ್ಪಿ ರಾಮಲಿಂಗಾಚಾರ್, ಜಗಳೂರಿನ ಶಿಲಾ ಶಿಲ್ಪಿ ಎ.ಕೆ.ಸುಬ್ಬಾಚಾರ್ಯ ಅವರಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಶಿಕ್ಷಕ ಎಂ.ನಾಗರಾಜ ಆಚಾರ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಸಿ.ಬಿ.ರಿಷ್ಯಂತ, ಜಿಪಂ ಸಿಇಒ ಡಾ.ಎ.ಚನ್ನಪ್ಪ, ಮೇಯರ್ ಜಯಮ್ಮ ಗೋಪಿನಾಥ್ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ನಾಗೇಂದ್ರಚಾರ್, ಪ್ರ.ಕಾರ್ಯದರ್ಶಿ ಬಿ.ವಿ.ಶಿವಾನಂದ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ಬಿ.ಸಿದ್ದಾಚಾರ್, ಸಂಘಟನಾ ಕಾರ್ಯದರ್ಶಿ ವಿ.ಎಂ.ಕೊಟ್ರೇಶಾಚಾರ್, ಖಜಾಂಚಿ ಬೇತೂರು ವಿಜಯಕುಮಾರ್, ನಿರ್ದೇಶಕ.ಬಿ.ಪಿ.ಜಗನ್ನಾಥ್, ಬೇತೂರು ಮಂಜುನಾಥ್ ಮತ್ತಿತರರು ಇದ್ದರು.