ನ್ಯೂಸ್

ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಹೋಗುತ್ತದೆ ಮಸೀದಿ ಧ್ವಂಸ ತೀರ್ಪಿನ ಬಗ್ಗೆ ಖರ್ಗೆ ಅಸಮಾಧಾನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಾಬರಿ ಮಸೀದಿ ಆರೋಪಿಗಳು ಖುಲಾಸೆ ವಿಚಾರ ನಮ್ಮೆಲ್ಲರಿಗೆ ಬೇಸರ ತರಿಸಿದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆಯನ್ನು ಅನೇಕರು ನೋಡಿದ್ದಾರೆ.

ಯಾರು ಮಸೀದಿ ಮೇಲೆ ಹತ್ತಿದ್ದರು ಎಂಬುದು ಎಲ್ಲವೂ ಗೊತ್ತಿದೆ. ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ. ವಿಶೇಷ ಸಾಕ್ಷಿ ಇಲ್ಲ ಎಂದು ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ ಎಂದರು.

ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿ ಕಾಣುತ್ತಿಲ್ಲ. ನ್ಯಾಯಾಂಗದ ಮೇಲೆ ವಿಶ್ವಾಸ ಜನರಿಗೆ ಹೋಗುತ್ತದೆ. ಎಂದು ಅಭಿಪ್ರಾಯಪಟ್ಟರು.

ಆಡ್ವಾಣಿಯವರು ರಾಮರಥ ಪ್ರಾರಂಭಿಸಿದರು, ಬಿಜೆಪಿ, ಆರ್‌ಎಸ್‌ಎಸ್‌ನವರೇ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದು. ಹೋಗಲಿ ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ ಹೋಗೋಕೆ ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ? ಹಾಗಾದರೆ ಬಾಬರಿ ಮಸೀದಿ ಒಡೆದಿದ್ದು ಯಾರು? ಎಂದು ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಹೈಕೋರ್ಟ್‌ಗೆ ಹೋಗುತ್ತಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆ ಯಾರು ನ್ಯಾಯಾಲಯದ ಮೆಟ್ಟಿಲೇರಿದ್ದರೂ ಅವರೇ ಹೈಕೋರ್ಟ್‌ಗೆ ಹೋಗುತ್ತಾರೆ. ಕಣ್ಣೆದುರೇ ಕಂಡ ದೃಶ್ಯಗಳನ್ನ ಸಾಕ್ಷ್ಯಗಳಾಗಿ ಪರಿಗಣಿಸಿಲ್ಲ, ಮುಂದೆ ಕೋರ್ಟ್ ತೀರ್ಪುಗಳು ಹೇಗೆ ಬರುತ್ತದೋ ಗೊತ್ತಿಲ್ಲ ಎಂದು ಖರ್ಗೆ ಅನುಮಾನ ವ್ಯಕ್ತಪಡಿಸಿದರು.