ನ್ಯೂಸ್

ನ್ಯಾಯಾಂಗ ನಿಂದನೆ, ಪ್ರಶಾಂತ್ ಭೂಷಣ್​ಗೆ 1 ರೂ. ದಂಡ

ನವದೆಹಲಿ: ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ಧದ ಆಕ್ಷೇಪಾರ್ಹ ಟ್ವೀಟ್​ಗಳಿಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್​ಗೆ 1 ರೂ. ದಂಡ ಕಟ್ಟುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸೆ.15ರ ಒಳಗಾಗಿ ದಂಡ ಕಟ್ಟದಿದ್ದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 3 ವರ್ಷಗಳ ಕಾಲ ವಕೀಲಿಕೆಗೆ ನಿಷೇಧ ಹೇರಲಾಗುವುದು ಎಂದು ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ.

ಹೇಳಿಕೆ ಹಿಂತೆಗೆದುಕೊಳ್ಳಲು ಮತ್ತು ಕ್ಷಮೆ ಕೋರಲು ಪ್ರಶಾಂತ್ ಭೂಷಣ್​ಗೆ ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. ಆದರೆ, ಹೇಳಿಕೆ ಹಿಂಪಡೆದುಕೊಳ್ಳಲು ಆತ್ಮಸಾಕ್ಷಿ ಒಪು್ಪವುದಿಲ್ಲ ಎಂದಿದ್ದ ಭೂಷಣ್, ಶಿಕ್ಷೆ ಸ್ವೀಕರಿಸಲು ಸಿದ್ಧ ಎಂದಿದ್ದರು.

ಎಚ್ಚರಿಕೆ ರವಾನೆ: ನ್ಯಾಯಾಂಗ ನಿಂದಕರನ್ನು ಜೈಲಿಗೆ ಕಳಿಸಲು ಅಥವಾ ವಕೀಲಿ ವೃತ್ತಿಯಿಂದ ದೂರವಿಡಲು ಕೋರ್ಟ್​ಗೆ ಯಾವುದೇ ಭಯವಿಲ್ಲ ಎಂಬ ಸಂದೇಶ ರವಾನೆಯಾಗಿದ್ದರೂ, ಕನಿಷ್ಠ ದಂಡ ವಿಧಿಸುವ ಮೂಲಕ ಪ್ರತೀಕಾರ ಧೋರಣೆ ಪ್ರದರ್ಶಿಸದಿರಲು ನ್ಯಾಯಮೂರ್ತಿಗಳು ಮುಂದಾದಂತಿದೆ. ಆದರೂ, ಖಡಕ್ ಎಚ್ಚರಿಕೆ ಕೊಟ್ಟಿದ್ದಂತೂ ಹೌದು. ‘ಭೂಷಣ್ ನಡವಳಿಕೆ ಹಠಮಾರಿ ಧೋರಣೆ ಮತ್ತು ಅಹಂಕಾರದ ಪ್ರತಿಬಿಂಬ. ಘನತೆವೆತ್ತ ನ್ಯಾಯಾಂಗದ ಆಡಳಿತ ವ್ಯವಸ್ಥೆಯಲ್ಲಿ ಇಂಥದ್ದಕ್ಕೆಲ್ಲ ಅವಕಾಶವಿಲ್ಲ. ಅಪರಾಧಿಯು ಈ ನ್ಯಾಯಾಲಯದ ಕರುಣೆಯನ್ನೇನೂ ನಿರೀಕ್ಷಿಸುತ್ತಿಲ್ಲ ಎಂದ ಮಾತ್ರಕ್ಕೆ ನಾವು ಪ್ರತೀಕಾರದ ರೀತಿಯಲ್ಲಿ ನಡೆದುಕೊಳ್ಳುವುದೂ ಸರಿಯಲ್ಲ. ನಿಂದಕರು ಅಪರಾಧಿಕ ಕೃತ್ಯ ಎಸಗಿದ್ದಾರೆ. ಶಿಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಅದಕ್ಕೆ ಪೂರಕವಾಗಿ ತೀರ್ಪು ನೀಡಿದ್ದೇವೆ’ ಎಂದು ನ್ಯಾ. ಅರುಣ್ ಮಿಶ್ರಾ ನೇತೃತ್ವದ ಪೀಠ ದಾಖಲಿಸಿದೆ.

ವಿಚಾರಣೆಯಲ್ಲಿ ಭೂಷಣ್, ‘ನಾನು ಸತ್ಯವನ್ನೇ ಬರೆದಿದ್ದೇನೆ ಮತ್ತು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸತ್ಯಾಂಶಕ್ಕೆ ಹೆಚ್ಚಿನ ಮಹತ್ವ ಅಲ್ಲವೇ’ ಎಂದು ವಾದಿಸಿದ್ದರು. ಇದನ್ನು ತಳ್ಳಿಹಾಕಿದ ನ್ಯಾಯಪೀಠ, ‘ನಿಮ್ಮ ಹೇಳಿಕೆಗಳು ದುರುದ್ದೇಶವಿಲ್ಲದ್ದು ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದೇನಲ್ಲ. ಬದಲಿಗೆ, ನ್ಯಾಯಾಲಯದ ಪ್ರತಿಷ್ಠೆಯನ್ನೇ ಪ್ರಶ್ನಿಸಿ, ಅವಹೇಳನಕಾರಿ ಮಾತುಗಳನ್ನಾಡಿದ್ದೀರಿ. ದೇಶದ ಸಾಮಾನ್ಯ ನಾಗರಿಕ ಈಗಲೂ ಸುಪ್ರೀಂಕೋರ್ಟ್ ಬಗ್ಗೆ ಅತೀವ ನಂಬಿಕೆ ಹೊಂದಿದ್ದಾನೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಾ, ಕೊನೆಯ ಪ್ರಯತ್ನವಾಗಿ ಸುಪ್ರೀಂಕೋರ್ಟನ್ನು ಸಂರ್ಪಸುತ್ತಾನೆ. ಹೀಗಿರುವಾಗ, ಆಕ್ಷೇಪಾರ್ಹ ಟ್ವೀಟ್​ಗಳು ಸಂಸ್ಥೆ ಬಗ್ಗೆ ಅಪನಂಬಿಕೆಗಳನ್ನು ಹುಟ್ಟುಹಾಕುತ್ತವೆ’ ಎಂದು ಪ್ರತಿಪಾದಿಸಿದೆ. ‘ನ್ಯಾಯಾಧೀಶರು ತಮ್ಮ ತೀರ್ಪಗಳ ಮುಖೇನವೇ ಮಾತನಾಡಬೇಕು. ಮಾಧ್ಯಮದಲ್ಲಿ ಆರೋಪ ಮಾಡುವುದು ಸುಲಭ. ನ್ಯಾಯಾಧೀಶರು ಅವೆಲ್ಲವನ್ನೂ ಸ್ವೀಕರಿಸಿ, ಮೌನದಿಂದಲೇ ನೋವುಣ್ಣಬೇಕಾಗುತ್ತದೆ. ವಿಪರೀತ ವಾಗ್ದಾಳಿಗಳು ನಡೆದಾಗ ನಿರ್ಭಯದಿಂದ ಕೆಲಸ ಮಾಡುವುದೂ ಕಷ್ಟವಾಗುತ್ತದೆ’ ಎಂದು ನ್ಯಾಯಪೀಠ ತನ್ನ ಒಳಬೇಗುದಿಯನ್ನು ತೀರ್ಪಿನಲ್ಲಿ ಹೊರಹಾಕಿದೆ.

2018ರ ಪತ್ರಿಕಾಗೋಷ್ಠಿಗೆ ಆಕ್ಷೇಪ: 2018ರಲ್ಲಿ ದೀಪಕ್ ಮಿಶ್ರಾ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ, ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ಕರೆದು ಸುಪ್ರೀಂಕೋರ್ಟ್ ಕಾರ್ಯವೈಖರಿಗೆ ಅಸಮಾಧಾನ ಹೊರಹಾಕಿದ್ದರು. ನ್ಯಾ. ಮಿಶ್ರಾ ಮತ್ತು ಹಾಲಿ ಪ್ರಕರಣದಲ್ಲಿ ತೀರ್ಪು ನೀಡಿರುವ ನ್ಯಾ. ಅರುಣ್ ಮಿಶ್ರಾ ಗುರಿಯಾಗಿಸಿಕೊಂಡೇ ಈ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಈ ಘಟನೆ ಉಲ್ಲೇಖಿಸಿ, ತಮ್ಮ ಟ್ವೀಟ್​ಗಳು ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಶಾಂತ್ ಭೂಷಣ್ ವಾದಿಸಿದ್ದರು. ಆದರೆ, ಪತ್ರಿಕಾಗೋಷ್ಠಿ ಘಟನೆಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ‘ಇದು ನ್ಯಾಯಮೂರ್ತಿಗಳ ಮೊದಲ ಹಾಗೂ ಕೊನೆಯ ಪತ್ರಿಕಾಗೋಷ್ಠಿ ಎಂಬ ಭಾವನೆ ನಮ್ಮದು. ಏನೇ ಸಮಸ್ಯೆಗಳಿದ್ದರೂ, ಆಂತರಿಕ ಕಾರ್ಯವಿಧಾನಗಳ ಮೂಲಕ ನ್ಯಾಯಾಂಗದ ಘನತೆ ಕಾಪಾಡಬೇಕು. ವಿನಾಕಾರಣ, ಸಾರ್ವಜನಿಕವಾಗಿ ಆರೋಪಗಳನ್ನು ಮಾಡಿದಾಗ, ಸಂತ್ರಸ್ತ ನ್ಯಾಯಮೂರ್ತಿಗೆ ದುಃಖವು ಶಾಶ್ವತವಾಗಿ ಕಾಡುತ್ತದೆ. ಸತ್ಯ ಎಂಬುದನ್ನು ನ್ಯಾಯಾಧೀಶನೂ ತನ್ನ ರಕ್ಷಣೆಗಾಗಿ ಬಳಸಬಹುದಲ್ಲವೇ? ಆದರೆ, ನ್ಯಾಯಾಂಗದ ನಿಯಮ, ನೀತಿ ಸಂಹಿತೆಗಳಿಗೆ ನ್ಯಾಯಮೂರ್ತಿ ಬದ್ಧನಾಗಿರಬೇಕಾಗುತ್ತದೆ. ಹಾಗೇ ವಕೀಲರಿಗೂ ಇದು ಅನ್ವಯವಾಗುತ್ತದೆ’ ಎಂದು ವಿವರಿಸಿದೆ.

ಟ್ವೀಟ್​ನಲ್ಲಿ ಏನಿತ್ತು: ಜೂನ್ 27ರ ಟ್ವೀಟ್​ನಲ್ಲಿ, ‘ಭವಿಷ್ಯದ ಇತಿಹಾಸಕಾರರು 2014ರಿಂದ 2020ರ ತನಕ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹೇಗೆ ಘಾಸಿಗೊಳಿಸಲಾಯಿತು ಎಂಬುದನ್ನು ದಾಖಲಿಸುವ ವೇಳೆ, ಅದರಲ್ಲಿ ಸುಪ್ರೀಂಕೋರ್ಟ್​ನ ಪಾಲುದಾರಿಕೆ ಮತ್ತು ಮುಖ್ಯವಾಗಿ 4 ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನೂ ದಾಖಲಿಸಬಹುದು’ ಎಂದು ಭೂಷಣ್ ಬರೆದುಕೊಂಡಿದ್ದರು. ಜೂನ್ 29ರಂದು ಸಿಜೆಐ ಎಸ್.ಎ. ಬೊಬ್ಡೆ ಕುರಿತ ಟ್ವೀಟ್​ನಲ್ಲಿ, ‘ಲಾಕ್​ಡೌನ್​ನಿಂದಾಗಿ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ದೇಶದ ಪ್ರಜೆಗಳು ನ್ಯಾಯಕ್ಕಾಗಿ ಪರಿತಪಿಸುವಂತಾಗಿದೆ. ಇಂಥಾ ಸನ್ನಿವೇಶದಲ್ಲಿ, ನಾಗ್ಪುರದ ಬಿಜೆಪಿ ಮುಖಂಡನೊಬ್ಬನಿಗೆ ಸೇರಿದ 50 ಲಕ್ಷ ರೂಪಾಯಿಯ ಬೈಕನ್ನು ಸಿಜೆಐ ರೈಡ್ ಮಾಡುತ್ತಿದ್ದಾರೆ. ನೋಡಿ, ಮಾಸ್ಕ್, ಹೆಲ್ಮೆಟ್ ಎರಡನ್ನೂ ಧರಿಸಿಲ್ಲ!’ ಎಂದು ಟೀಕಿಸಿದ್ದರು. ವಿಚಾರಣೆ ವೇಳೆ ‘ಭೂಷಣ್​ಗೆ ಶಿಕ್ಷೆ ನೀಡಬಾರದು, ಎಚ್ಚರಿಕೆ ನೀಡಿ ಬಿಟ್ಟು ಬಿಡಬೇಕು’ ಎಂದು ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಿನಂತಿಸಿಕೊಂಡಿದ್ದರು.

‘ಸಮಾಜಕ್ಕೆ ಆದರ್ಶವಾಗಬೇಕಿರುವ ನ್ಯಾಯವಾದಿಗಳೇ ಕ್ಷುಲ್ಲಕ ಕಾರಣಗಳಿಗಾಗಿ ನ್ಯಾಯಾಂಗ ನಿಂದನೆ ಮಾಡಿದಾಗ ಅದನ್ನು ಸರಿಯಾದ ರೀತಿಯಲ್ಲಿ ಖಂಡಿಸಿ ಶಿಕ್ಷಿಸಬೇಕು. ಹಾಗಿದ್ದರೂ ನ್ಯಾಯಾಲಯ ಔದಾರ್ಯತೆ ಮೆರೆದಿದೆ. ಒಟ್ಟಿನಲ್ಲಿ, ಸಮಾಜಕ್ಕೆ ಹಾಗೂ ವಿತಂಡವಾದ ಮಾಡಲು ಹಾತೊರೆಯುವ ಕೆಲವು ‘ಗಣ್ಯ’ ವ್ಯಕ್ತಿಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಅವರ ಹಕ್ಕುಬಾಧ್ಯತೆಗಳ ಮನನ ಮಾಡಿಕೊಟ್ಟಿದೆ. | ರಾಘವೇಂದ್ರ ಶ್ರೀವತ್ಸ ಸುಪ್ರೀಂಕೋರ್ಟ್ ವಕೀಲರು https://www.vijayavani.net/girl-swept-more-than-100-feet-in-the-air-by-giant-kite/