ಎನ್.ಆರ್.ಪುರ: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ತಾಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶೆಟ್ಟಿಕೊಪ್ಪದ ಲ್ಯಾಂಪ್ ಸೊಸೈಟಿ, ಎನ್.ಆರ್.ಪುರದಲ್ಲಿರುವ ಹಳ್ಳಿ ಸೊಸೈಟಿ, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಹಂತುವಾನಿಯ ನ್ಯಾಯ ಬೆಲೆ ಅಂಗಡಿ, ಬಿ.ಎಚ್.ಕೈಮರದ ಸೀತೂರು ಸೊಸೈಟಿಗಳಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಘು, ಬೇಸಿಲ್, ಜಯರಾಂ, ಸಂದೀಪ್, ನಿತ್ಯಾನಂದ ಭೆೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರ ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ನೀಡಲು ಆದೇಶಿಸಿದೆ. ಈ ಹಿಂದೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯ ಹಣ ನೀಡಲಾಗುತ್ತಿತ್ತು. ಈಗ 5 ಕೆಜಿ ಅಕ್ಕಿಯ ಹಣದ ಬದಲಿದೆ 5 ಕೆಜಿ ಅಕ್ಕಿಯನ್ನೇ ನೀಡಲಾಗುತ್ತಿದೆ. ಅಲ್ಲದೆ ಫೆಬ್ರವರಿಯ 5 ಕೆಜಿ ಅಕ್ಕಿ ಸೇರಿಸಿ ಈ ತಿಂಗಳಲ್ಲಿ ಕುಟುಂಬದ ಒಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿ ನೀಡಲಾಗುತ್ತಿದೆ. ಮುಂದಿನ ತಿಂಗಳಲ್ಲಿ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿ ಮಾತ್ರ ನೀಡಲಾಗುತ್ತದೆ. ಇದನ್ನು ನ್ಯಾಯ ಬೆಲೆ ಅಂಗಡಿಯವರು ಬಿಪಿಎಲ್ ಕಾರ್ಡ್‌ದಾರರಿಗೆ ಮನವರಿಕೆ ಮಾಡಬೇಕು ಎಂದು ಸಮಿತಿ ಸದಸ್ಯರು ನ್ಯಾಯಬೆಲೆ ಅಂಗಡಿಯವರಿಗೆ ಸೂಚಿಸಿದರು.
ಸರ್ಕಾರ ಬಡವರಿಗೆ ನೀಡುವ ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ರದ್ದು ಪಡಿಸಲಾಗುವುದು ಎಂಬ ಸೂಚನಾ ಫಲಕವನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲೂ ಹಾಕಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಯಿತು. ಈ ಹಿಂದೆ ಅಕ್ಕಿ ನೀಡುವುದಕ್ಕೆ ಕಾಲಾವಧಿ ನಿಗದಿ ಮಾಡಲಾಗಿತ್ತು. ಈಗ ತಿಂಗಳ ಕೊನೆಯವರೆಗೂ ಅಕ್ಕಿ ನೀಡಲಾಗುತ್ತದೆ ಎಂದು ಗ್ಯಾರಂಟಿ ಸಮಿತಿ ಸದಸ್ಯರಾದ ರಘು, ಬೇಸಿಲ್ ನ್ಯಾಯಬೆಲೆ ಅಂಗಡಿಗೆ ಆಗಮಿಸಿದ್ದ ಕಾರ್ಡ್‌ದಾರರಿಗೆ ತಿಳಿಸಿದರು.