ನ್ಯೂಸ್

ನೌಕರರ ವೇತನ ತಾರತಮ್ಯ ಸರಿಪಡಿಸಿ

ಬೆಳಗಾವಿ: ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ವೇತನ ಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇಲಾಖೆಗಳ ಹಿರಿಯ ಅಧಿಕಾರಿಗಳು ತಮ್ಮ ಸಂಬಂಧಿ ಹಾಗೂ ಪ್ರಭಾವಿಗಳ ಅಧಿಕಾರಿಗಳ ಮಕ್ಕಳನ್ನು ಮಾತ್ರ ನೇರ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಪರಿಶೀಲಿಸಿ, ಗುತ್ತಿಗೆ ನೌಕರರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಗುತ್ತಿಗೆ ಕಾರ್ಮಿಕರು ಪ್ರತಿಭಟಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಇಲ್ಲಿನ ಸುವರ್ಣ ಗಾರ್ಡನ್‌ನಲ್ಲಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆ ನೌಕರರು, ತಮಗೆ ಆಗುತ್ತಿರುವ ಅನ್ಯಾಯ ಹಾಗೂ ವೇತನ ತಾರತಮ್ಯದ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ಪಾವತಿ, ದಿನಗೂಲಿ ನೌಕರರು, ವಾಟರ್‌ಮನ್‌ಗಳು, ಕಸ ಸಂಗ್ರಹದ ಆಟೋ ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು ಹಾಗೂ ಯುಜಿಡಿ ಕಾರ್ಮಿಕರಿಗೆ ಸಮಾನ ಕೂಲಿ ಒದಗಿಸಬೇಕು ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಬಹುತೇಕ ಎಲ್ಲ ಸಂಸ್ಥೆಗಳಲ್ಲೂ ಹೊರಗುತ್ತಿಗೆ ಏಜೆನ್ಸಿಯನ್ನು ತಮ್ಮ ಸಂಬಂಧಿಕರಿಗೆ ವಹಿಸುತ್ತಿದ್ದಾರೆ. ಇದರಿಂದ ನಾವು ನ್ಯಾಯಯುತವಾದ ಬೇಡಿಕೆ ಇಟ್ಟರೆ ಹಾಗೂ ಅನ್ಯಾಯ ಪ್ರಶ್ನಿಸಿದರೆ, ಇದ್ದ ಕೆಲಸದಿಂದಲೂ ಹೊರದಬ್ಬುತ್ತಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಆರೋಪಗಳ ಸುರಿಮಳೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ ನಾಗಭೂಷಣ ಅವರಲ್ಲಿ ಪ್ರತಿಭಟನಾ ಕಾರರು ಸ್ಥಳೀಯ ಅಧಿಕಾರಿಗಳು ಮಾಡುತ್ತಿರುವ ದೌರ್ಜನ್ಯದ ಬಗ್ಗೆ ಆರೋಪಗಳು ಸುರಿಮಳೆ ಗೈದರು. ಬೆಳಗಾವಿಯ ಎಲ್‌ಆ್ಯಂಡ್‌ಟಿ ಕಂಪನಿಯು ನಗರದಲ್ಲಿ 24್ಡ7 ಕುಡಿಯುವ ನೀರು ಯೋಜನೆ ಗುತ್ತಿಗೆ ಪಡೆದಿದೆ.

ಜಲಮಂಡಳಿಯ 350ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ನಿಯೋಜಿಸಲಾಗಿದೆ. ಆದರೆ, ತಮ್ಮ ಆಪ್ತರನ್ನು ಹಾಗೂ ಮಾಜಿ ಸಿಬ್ಬಂದಿಯ ಮಕ್ಕಳನ್ನು ಮಾತ್ರ ಜಲಮಂಡಳಿಯಲ್ಲಿಟ್ಟುಕೊಳ್ಳಲಾಗಿದೆ. ಗುತ್ತಿಗೆ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳುತ್ತಿರುವ ಪ್ರಸ್ತಾವನೆ ಜತೆಗೆ ತಮ್ಮ ಆಪ್ತರ ಪಟ್ಟಿ ಮಾತ್ರ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. ದಶಕಗಳ ಕಾಲ ಜಲಮಂಡಳಿಯಲ್ಲೇ ಕೆಲಸ ಮಾಡಿದ ನೌಕರರನ್ನು ನಿರ್ಲಕ್ಷಿಸಿ, ಇತ್ತೀಚೆಗೆ ಬಂದವರನ್ನು ಮಾತ್ರ ನೇರ ನೇಮಕಾತಿಗೆ ಪ್ರಸ್ತಾಪಿಸಿರುವುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಬೇಕು. ವಂಚಿತ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕ್ರಮದ ಭರವಸೆ: ಪ್ರತಿಭಟನಾಕಾರರ ಅಹವಾಲು ಆಲಿಸಿ ಪ್ರತಿಕ್ರಿಯಿಸಿದ ಡಾ.ನಾಗಭೂಷಣ ಅವರು, ಎಲ್ಲ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸರ್ಕಾರದಿಂದ ಸೂಕ್ತ ವಿಚಾರಣೆ ನಡೆಸಿ, ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ಅಲ್ಲದೆ, ಕೆಲ ದಿನಗಳಲ್ಲಿ ಈ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಮ್ಮ ಸಂಘಟನೆ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆ ಅಧ್ಯಕ್ಷ ಹರೀಶ ನಾಯಕ್, ಖಜಾಂಚಿ ಸಿ.ವೆಂಕಟೇಶ, ಉಪಾಧ್ಯಕ್ಷ ಲಕ್ಷ್ಮಣ ಹಂದ್ರಾಳ, ಸೈಯದ್ ಮುಜೀಬ್, ಎನ್.ಕೆ. ಸುಬ್ರಹ್ಮಣ್ಯಂ, ಸ್ಯಾಮಸನ್, ಬಸವರಾಜ ಕಾಂಬಳೆ, ಶಾನೂರ್ ಜಿ., ವಿಠ್ಠಲ ತಳವಾರ, ಮಂಜೂರ್ ಪಾಟೀಲ ಇತರರು ಇದ್ದರು.