ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿ ಎಂತಲೇ ಖ್ಯಾತಿ ಹೊಂದಿರುವ, ಪ್ರವಾಸಿ ತಾಣ ನಂದಿ ಗಿರಿಧಾಮದಲ್ಲಿ ರೋಪ್ ವೇ ನಿರ್ಮಿಸುವ ಕಾಮಗಾರಿಯ ತಾಂತ್ರಿಕ ಸಲಹೆಗಳ ಕುರಿತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್ ನೇತೃತ್ವದಲ್ಲಿ ಚರ್ಚೆ ನಡೆಯಿತು, ಗಿರಿಧಾಮದ ನೈಜ ವಾತಾವರಣಕ್ಕೆ ಧಕ್ಕೆಯಾಗದಂತೆ ರೋಪ್ ವೇ ನಿರ್ಮಾಣವನ್ನು ಮರು ಉಚ್ಛರಿಸಲಾಯಿತು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ಕೈಗೊಂಡಿದ್ದ ಸಭೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು, ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರವಾಸಿಗರ ಸುರಕ್ಷತೆ ಸೇರಿ ಹಲವು ವಿಚಾರಗಳು ಪ್ರಸ್ತಾಪವಾದವು. ಆಯಾ ಹಂತದಲ್ಲಿ ತ್ವರಿತವಾಗಿ ಕೆಲಸಗಳನ್ನು ಕೈಗೊಳ್ಳಲು ನಿರ್ದೇಶಕರು ಸಂಬಂಧಪಟ್ಟ ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದರು.
ತಾಂತ್ರಿಕ ಸಲಹಾ ಸಂಸ್ಥೆಯಾದ ರಾಜ್ಯ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ನಿಶಿತ್, ನಾನಾ ಭಾಗಗಳಲ್ಲಿ ನಿರ್ಮಿಸಿರುವ ರೋಪ್ ವೇ ಮತ್ತು ಕಾರ್ಯ ನಿರ್ವಹಣೆ, ಮೂಲ ಸೌಕರ್ಯದ ವಿಚಾರಗಳು ಹಾಗೂ ನಂದಿ ಗಿರಿಯಲ್ಲಿ ಸಿದ್ಧತಾ ಹಂತ ಮತ್ತು ತಾಂತ್ರಿಕ ವಿಚಾರಗಳ ಮಾಹಿತಿ ನೀಡಿದರು.
ಗಿರಿಧಾಮದ ತಪ್ಪಲಿನಿಂದ ಬೆಟ್ಟಕ್ಕೆ ಅಂದಾಜು 3 ಕಿ.ಮೀ ಉದ್ದ ರೋಪ್ ವೇ ಲೈನ್ ಅಳವಡಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಡಿಪಿಆರ್ ಇನ್ನೂ ತಯಾರಾಗಿಲ್ಲ ಆದರೆ ತಾಂತ್ರಿಕ ಸಲಹಾ ಸಮಿತಿ ನೀಡುವ ಸಲಹೆಗಳನ್ನಾಧರಿಸಿ ಯೋಜನೆ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ನಂದಿ ಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್, ಐಡೆಕ್ ಸಂಸ್ಥೆ ವ್ಯವಸ್ಥಾಪಕರಾದ ಎಂ.ಎ.ನಿಜಾಮುದ್ದೀನ್, ರಾಜೇಶ್ ರಂಜನ್ ಮತ್ತಿತರರು ಇದ್ದರು.
ಅಂದಾಜು 93 ಕೋಟಿ ಯೋಜನೆ: ನಂದಿ ಬೆಟ್ಟದ ರೋಪ್ ವೇ ನಿರ್ಮಾಣ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ 93 ಕೋಟಿ ರೂ. ಅನುದಾನ ಅಗತ್ಯತೆಯನ್ನು ಅಂದಾಜಿಸಲಾಗಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ತೂಬಗೆರೆ ಹೋಬಳಿ ಹೆಗ್ಗಡಿಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 94 ರಲ್ಲಿ 3.20 ಎಕರೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಹೋಬಳಿಯ ಮಡಕುಹೊಸಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 28 ರಲ್ಲಿ 3.20 ಎಕರೆ ಜಮೀನನ್ನು ಮತ್ತು ಬೆಟ್ಟದಲ್ಲಿ 2 ಎಕರೆ ಗುರುತಿಸಲಾಗಿದೆ. ಇಲ್ಲಿ ಪಾರ್ಕಿಂಗ್, ಹೋಟೆಲ್ ಸೇರಿ ಅಗತ್ಯ ಕಟ್ಟಡಗಳು, ಪ್ರವಾಸಿಗರ ತಂಗುದಾಣ ಸೇರಿ ಅಗತ್ಯ ಸೌಕರ್ಯಗಳು ಲಭ್ಯವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ.
ಹಲವೆಡೆ ಮಣ್ಣಿನ ಪರೀಕ್ಷೆ: ಗಿರಿಧಾಮದ ತಪ್ಪಲು ಮತ್ತು ಬೆಟ್ಟದ ಮೇಲಿನ ಹಲವೆಡೆ ಮಣ್ಣನ್ನು ತೆಗೆದು ಪರೀಕ್ಷೆ ಮಾಡಲಾಗಿದೆ. ಈಗಾಗಲೇ ಕಾರ್ಯಪಾಲಕ ಅಭಿಯಂತ ತಂಡ ರೋಪ್ ವೇ ನಿರ್ಮಾಣಕ್ಕೆ ಪಿಲ್ಲರ್‌ಗಳು ಮತ್ತು ಲೈನ್ ಅಳವಡಿಕೆ ಸಾಮರ್ಥ್ಯವನ್ನು ಪರಿಶೀಲಿಸಿದ್ದಾರೆ. ಈಗಾಗಲೇ ಸೂಕ್ತವಾಗಿದೆ ಎಂಬ ವರದಿಯೂ ಸಿಕ್ಕಿದ್ದೂ ಡಿಪಿಆರ್ ತಯಾರಿಸಿದ ಬಳಿಕ ನಿರ್ವಹಣೆಗೆ ಟೆಂಡರ್ ಕರೆದು ನಿಯಮಾನುಸಾರ ಅರ್ಹ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ ಎನ್ನಲಾಗಿದೆ.
ತ್ವರಿತ ಸಾಕಾರದ ನಿರೀಕ್ಷೆ: ಸೂಕ್ಷ್ಮ ಪರಿಸರ ವಲಯ ಎಂತಲೇ ಗುರುತಿಸಿಕೊಂಡಿರುವ ನಂದಿ ಗಿರಿಧಾಮದ ನೈಜ ವಾತಾವರಣಕ್ಕೆ ಧಕ್ಕೆಯಾಗದಂತೆ ತ್ವರಿತವಾಗಿ ರೋಪ್ ವೇ ಅಳವಡಿಸಬೇಕೆಂಬ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಗಿರಿಧಾಮದ ಪರಿಸರಕ್ಕೆ ಮಾರಕವಾದ ಯಾವುದೇ ಕೆಲಸಗಳನ್ನು ಕೈಗೊಳ್ಳದೇ ದೇಶಾದ್ಯಂತ ರೋಪ್ ವೇ ನಿರ್ಮಾಣದಲ್ಲಿ ಅನುಭವವಿರುವ ಸಂಸೆ ಮೂಲಕ ಕೈಗೊಂಡ ಅಧ್ಯಯನದ ಆಧಾರದ ಮೇಲೆ ಸುರಕ್ಷತೆ, ತಾಂತ್ರಿಕತೆ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕರ್ನಾಟಕದ ಎಲ್ಲೂ ರೋಪ್ ವೇ ನಿರ್ಮಾಣವಾಗಿಲ್ಲ. ಇನ್ನು ಇಲ್ಲಿ ಸ್ಥಾಪನೆಯಾಗುತ್ತಿರುವುದು ಸಂತಸ ಜತೆಗೆ 80 ರ ದಶಕದಲ್ಲಿಯೇ ನಟ ಶಂಕರ್‌ನಾಗ್ ಕಂಡಿದ್ದ ಕನಸು ಕೂಡ ನನಸಾಗಲಿದೆ.