ನ್ಯೂಸ್

ನೇರಳೆಕುಪ್ಪೆ ಹಾಲು ಉತ್ಪಾದಕರ ಸಂಘಕ್ಕೆ 3.76 ಲಕ್ಷ ರೂ.ಲಾಭ

ಹನಗೋಡು: ಹನಗೋಡು ಹೋಬಳಿ ನೇರಳಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 3,76,781 ರೂ.ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.


ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸರ್ವಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಸಂಘವು ಈ ಸಾಲಿನಲ್ಲಿ 1,45,90,038 ರೂ. ವ್ಯವಹಾರ ನಡೆಸಿದೆ. ಈ ಪೈಕಿ ಆಡಳಿತ್ಮಾಕ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಇತರೆ ಖರ್ಚು ಕಳೆದು 3,76,781 ರೂ. ಲಾಭಗಳಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಮೈಸೂರು ಹಾಲು ಒಕ್ಕೂಟವು ಕರೊನಾ ಸಮಯದಲ್ಲಿ ಹೈನುಗಾರರ ಹಿತ ಕಾಪಾಡುವುದರೊಂದಿಗೆ ಸಂಘಗಳ ಆದಾಯ ವೃದ್ಧಿಗೂ ಸಹಕಾರಿಯಾಗಿದೆ. ಸಂಘದ ಎಲ್ಲ ಸದಸ್ಯರು ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರೊಂದಿಗೆ ರಾಸುಗಳಿಗೂ ವಿಮೆ ಮಾಡಿಸುವಂತೆ ಸಲಹೆ ನೀಡಿದರು.


ಸಂಘದ ಅಧ್ಯಕ್ಷ ಎಂ.ಜೆ.ಅಪ್ಪಣ್ಣ ಮಾತನಾಡಿ, ಸಂಘದ ಎಲ್ಲ ಕಾರ್ಯ ಚಟುವಟಿಕೆಗಳನ್ನು ಪಾರದರ್ಶಕವಾಗಿ ನಡೆಸಿಕೊಂಡು ಹೋಗುತ್ತಿದ್ದು, ಮುಂದೆಯೂ ಎಲ್ಲರ ಸಹಕಾರದೊಂದಿಗೆ ಸಂಘವನ್ನು ಇನ್ನೂ ಹೆಚ್ಚಿನ ಲಾಭದತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚಿನ ಹಾಲು ಉತ್ಪಾದಿಸಿ ಸಂಘಕ್ಕೆ ಮಾರಾಟ ಮಾಡಿದ ದಿನೇಶ್, ರೇವಣ್ಣ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಹೈನುಗಾರರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಯಿತು.


ಸಂಘದ ಉಪಾಧ್ಯಕ್ಷ ಕಚುವಿನಹಳ್ಳಿ ಸದಾಶಿವ, ವಿಸ್ತೀರ್ಣ ಅಧಿಕಾರಿ ಬಿ.ಗೌತಮ್, ಕಾರ್ಯದರ್ಶಿ ಗಣೇಶ್, ನಿರ್ದೇಶಕರು, ಹೈನುಗಾರರು ಇದ್ದರು.