ನ್ಯೂಸ್

ನೃಪತುಂಗ ಶಾಲೆಗೆ ವಿಜ್ಞಾನ ಉಪಕರಣ ವಿತರಣೆ

ಬೆಂಗಳೂರಿನ ಪ್ರಯೋಗ ಸಂಸ್ಥೆ ವತಿಯಿಂದ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಗೆ ನೀಡಿರುವ ವಿಜ್ಞಾನ ಉಪಕರಣಗಳ ಉದ್ಘಾಟನಾ ಕಾರ್ಯಕ್ರಮ ಬುಧವಾರ ನೆರವೇರಿತು.

ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ವಿಜ್ಞಾನ ಉಪಕರಣಗಳ ಬಳಕೆಗೆ ಚಾಲನೆ ನೀಡಿದರು. ಸದ್ಯ ನೃಪತುಂಗ ಕನ್ನಡ ಶಾಲೆಯಲ್ಲಿ ಪ್ರಯೋಗದ ಮೂಲಕ ವಿಜ್ಞಾನ ಕಲಿಕೆಯನ್ನು ಎಂಟನೇ ತರಗತಿಗೆ ವಿಸ್ತರಣೆ ಮಾಡಲಾಗಿದೆ.

ಕಾಸ್ಮೋಸ್ ಸಂಸ್ಥೆಯ ಸಹಯೋಜನಾಧಿಕಾರಿ ಅಮೋಘವರ್ಷ ಮಾತನಾಡಿ, ಮಕ್ಕಳಿಗೆ ಪ್ರಯೋಗದ ಮೂಲಕ ವಿಜ್ಞಾನವನ್ನು ಯಾಕೆ ಕಲಿಯಬೇಕು ಎಂಬುದನ್ನು ಕಥೆಯ ಮೂಲಕ ಹೇಳಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಿದರು.

ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಉಪಾಧ್ಯಕ್ಷ ಸ.ರ.ಸುದರ್ಶನ ಮಾತನಾಡಿ, ಪ್ರಯೋಗ ಸಂಸ್ಥೆಯ ಮುಖ್ಯಸ್ಥ ಎಚ್.ಎಸ್.ನಾಗರಾಜ್ ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡರು. ಇಂಗ್ಲಿಷ್ ಮಾಧ್ಯಮದಂತೆ ವಿಜ್ಞಾನ ಪ್ರಾಯೋಗಿಕ ಕಲಿಕೆಯನ್ನು ಕನ್ನಡ ಮಾಧ್ಯಮಕ್ಕೂ ವಿಸ್ತರಿಸಿ ಎಂದು ಸಲಹೆ ನೀಡಿದ್ದೆ. ನಾಗರಾಜ್ ಅವರು ಅದನ್ನು ಸವಾಲಿನಂತೆ ಸ್ವೀಕರಿಸಿದರು. ಇಂದು ನಮ್ಮ ಶಾಲೆ ಸೇರಿದಂತೆ ರಾಜ್ಯದ ಸುಮಾರು 62 ಸರ್ಕಾರಿ ಶಾಲೆಗಳಿಗೆ ಕನ್ನಡ ಮಾಧ್ಯಮದಲ್ಲಿ ಪ್ರಯೋಗದ ಅಭ್ಯಾಸ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಮಾಧ್ಯಮದ ಬಡ ಮಕ್ಕಳಿಗೆ ಪ್ರಯೋಗದ ಮೂಲಕ ವಿಜ್ಞಾನವನ್ನು ಕಲಿಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಪ್ರಯೋಗ ಸಂಸ್ಥೆಯ ನಿರ್ದೇಶಕ ಕೆ.ಎಸ್.ನಾಗಭೂಷಣ್ ಮಾತನಾಡಿ, ಪ್ರಯೋಗದ ಮೂಲಕ ಕಲಿತಾಗ ವಿಜ್ಞಾನ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ ಎಂದು ಮಕ್ಕಳಿಗೆ ತಿಳಿಸಿದರು. ಹಾಗೂ ಪ್ರಾಯೋಗಿಕ ಉಪಕರಣಗಳನ್ನು ಶಾಲೆಗೆ ವಿತರಿಸಿದರು.

ಪ್ರಯೋಗ ಸಂಸ್ಥೆಯ ಮುಖ್ಯಸ್ಥ ಪ್ರಹ್ಲಾದ್, ಶೈಕ್ಷಣಿಕ ಸಂಯೋಜಕ ಬಿ.ಜಿ.ಮಲ್ಲಿಕಾರ್ಜುನ್, ಕುಮಾರಿ ಕಾವ್ಯಾ ಇತರರಿದ್ದರು.