ನ್ಯೂಸ್

ನೂತನ ಡಿಎಫ್.ಓ ಗೆ ಅಧಿಕಾರ ಹಸ್ತಾಂತರಿಸಿದ ಏಡುಕೊಂಡಲು / ಜಿಲ್ಲೆಯಲ್ಲಿ ೨೮ ತಿಂಗಳಿನಲ್ಲಿ ೨೮೦೦ ಎಕರೆ ಒತ್ತುವರಿ ತೆರವು ಮಾಡಿದ್ದೇನೆ / ಮುಂಬಡ್ತಿ ಸಂತಸ ತಂದಿದೆ / ಏಡುಕೊಂಡಲು

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಕಳೆದ ೨೮ ತಿಂಗಳಲ್ಲಿ ೨,೮೦೦ ಎಕರೆ ಒತ್ತುವರಿ ತೆರವು ಮಾಡಿದ್ದು, ಸುಮಾರು ೧೦ ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಜಮೀನು ವಾಪಸ್ ಬಂದಿದೆ' ಎಂದು ಐಎಸ್ ಅಧಿಕಾರಿ ಏಡುಕೊಂಡಲು ತಿಳಿಸಿದರು.

ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಎಫ್)ಬಡ್ತಿ ಪಡೆದು ವರ್ಗಾವಣೆಗೊಂಡಿರುವ ಅವರು ಶುಕ್ರವಾರ ನೂತನ ಡಿಸಿಎಫ್ ಸರೀನಾ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರೀನಿವಾಸಪುರ ತಾಲ್ಲೂಕಿನ ಜಿನಗಲಕುಂಟೆ ಸರ್ವೆ ಸಂಖ್ಯೆ ೧ ಹಾಗೂ ೨ರ ಜಮೀನಿನ ವಿಚಾರವು ಒಂದು ಹಂತಕ್ಕೆ ತಲುಪಿದೆ. ಜ.೧೫ ಕ್ಕೆ ಜಂಟಿ ಸರ್ವೇ ಕಾರ್ಯ ನಡೆಸಲು ಹೈಕೋರ್ಟ್ ಕೂಡ ನಿರ್ದೇಶನ ನೀಡಿದೆ' ಎಂದರು.

'ಒAದು ಬಾರಿ ನ್ಯಾಯಾಲಯದಲ್ಲಿ ಅರಣ್ಯ ಎಂದು ತೀರ್ಪು ನೀಡಿದ ಮೇಲೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅರಣ್ಯ ಒತ್ತುವರಿದಾರರು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟರೆ ಒಳ್ಳೆಯದು. ಅರಣ್ಯ ಒತ್ತುವರಿ ಎಂಬುವುದು ಭೂತ ಇದ್ದಂತೆ. ಅದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ' ಎಂದು ತಿಳಿಸಿದರು.

'ನನ್ನ ವರ್ಗಾವಣೆಗೆ ಬಡ್ತಿ ಕಾರಣ ಹೊರತು ರಾಜಕೀಯ ಪ್ರೇರಿತವಲ್ಲ. ಬಡ್ತಿ ಬಂದಿರುವುದು ನನಗೆ ಸಂತಸ ತಂದಿದೆ. ರಾಜ್ಯದಲ್ಲಿ ೧೦೦ ಅಧಿಕಾರಿಗಳಿಗೆ ಬಡ್ತಿ ಸಿಕ್ಕಿದೆ. ನನ್ನ ಬ್ಯಾಚ್ ನ ೩೦ ಜನರಲ್ಲಿ ನನಗೂ ಬಂದಿದೆ. ಕೆಲವರು ನನ್ನ ಬಡ್ತಿಗಾಗಿ ಕಾದಿದ್ದರು, ಕಾರಣ ಅವರಿಗೆ ಮುಂದೆ ತೊಂದರೆ ಇರುವುದಿಲ್ಲವೆಂದು. ಅಂಥವರಿಗೆ ಆಕಸ್ಮಿಕವಾಗಿ ಬೆನಿಫಿಟ್ ಸಿಕ್ಕಿದ್ದು ಹೊಸ ಡಿಸಿಎಫ್ ಅದನ್ನು ವಾಪಸ್ ಕಿತ್ತುಕೊಳ್ಳುತ್ತಾರೆ ಎನ್ನುವುದಂತೂ ನಿಜ' ಎಂದರು.

'ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಪ್ರಕಾರವೇ ನಡೆದಿದೆ. ೩ ಎಕರೆಗಿಂತಲೂ ಹೆಚ್ಚಿನ ಒತ್ತುವರಿಯನ್ನೇ ತೆರವು ಮಾಡಿದ್ದೇವೆ. ಶೇ ೯೯ ಓಕೆ, ಶೇ ೧ ರಷ್ಟು ಮಧ್ಯ ಸಿಲುಕಿ ತೊಂದರೆಯಾಗಿರಬಹುದು. ಅದು ಸಹಜ ಪ್ರಕ್ರಿಯೆಯಾಗಿದ್ದು, ರೈತರೇ ನನಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒತ್ತುವರಿ ತೆರವು ಬಳಿಕ ಅವರ ಮನೆಯಲ್ಲೇ ಊಟ ಮಾಡಿದ್ದೇನೆ. ಯಾರೋ ಕೆಲವರು ರಾಜಕೀಯಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ' ಎಂದು ತಿಳಿಸಿದರು.

'ಸಮಾಧಾನ ಆಗದೇ ಇರುವಂತಹ ವಿಚಾರ ನನಗೆ ಯಾವುದೂ ಇಲ್ಲ. ನನಗೆ ಒಂದು ದಾರಿ ಮುಚ್ವಿದರೆ ಮತ್ತೊಂದು ದಾರಿ ತೆರೆದುಕೊಳ್ಳುತ್ತದೆ. ಎಲ್ಲರ ಜತೆಗೂ ನಾನು ಒಡನಾಡಿಯಾಗಿದ್ದೇನೆ' ಎಂದು ನುಡಿದರು.

'ನನ್ನ ಈ ಕೆಲಸಕ್ಕೆ ಹಿಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಈಗಿನ ಎಸ್ಪಿ ಬಿ.ನಿಖಿಲ್ ಸಹಕಾರ ನೀಡಿದರು' ಎಂದರು.

'ನನ್ನ ೨೮ ತಿಂಗಳ ಅವಧಿಯಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರ ನನಗೆ ಹಾಗೂ ಸಿಬ್ಬಂದಿಗೆ ನೆಮ್ಮದಿ ನೀಡಿದೆ. ಅದು ನಮ್ಮ ಆದ್ಯ ಕರ್ತವ್ಯವಾಗಿದ್ದು ಅರಣ್ಯೀಕರಣಕ್ಕೆ ಸಹಕಾರಿಯಾಗಿದೆ. ಅಂತಹ ಅದೃಷ್ಟ ನನಗೆ ತೃಪ್ತಿ ತಂದಿದೆ. ಒತ್ತುವರಿ ಕಾರ್ಯದ ಜತೆಗೆ ಅರಣ್ಯೀಕರಣ ಕಾರ್ಯಕ್ರಮವು ಉತ್ತಮವಾಗಿದೆ. ಅರಣ್ಯ ಸಂರಕ್ಷಣೆಗೆ ಒತ್ತು ನೀಡಲಾಗಿದೆ' ಎಂದು ಹೇಳಿದರು.

'ನೀಲಗಿರಿಯು ಜಿಲ್ಲೆಯಲ್ಲಿ ೧೦ ಸಾವಿರ ಎಕರೆಯಷ್ಟಿದ್ದು, ನನ್ನ ಅವಧಿಯಲ್ಲಿ ೪ ಸಾವಿರ ಎಕರೆ ತೆರವು ಮಾಡಿ, ಅರಣ್ಯೀಕರಣ ಮಾಡಿದ್ದೇವೆ' ಎಂದರು.

'ಮಾಧ್ಯಮದವರು, ರೈತಪರ, ಪ್ರಗತಿಪರ, ಪರಿಸರ ಪರ ಸಂಘಟನೆಗಳು ನಮಗೆ ಸಾಥ್ ನೀಡಿದವು. ಸಾರ್ವಜನಿಕರು ಸಹ ನಮ್ಮ ಕೆಲಸಗಳಿಗೆ ಸಹಕಾರ ನೀಡಿದರು. ನ್ಯಾಯಾಲಯದಿಂದಲೂ ಸಲಹೆ, ಸೂಚನೆ ಸಿಕ್ಕಿದ್ದವು' ಎಂದು ತಿಳಿಸಿದರು.

ಏಡುಕೊಂಡಲು ಅವರಿಂದ ತೆರವಾದ ಸ್ಥಾನಕ್ಕೆ ಬೆಂಗಳೂರು ಗ್ರಾಮಾಂತರ ವಲಯ ಡಿಎಫ್‌ಓ ಆಗಿದ್ದ ಸರೀನಾ ಸಿಕ್ಕಲಿಗರ್ ಅವರನ್ನು ವರ್ಗಾವಣೆ ಮಾಡಿದೆ. ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಚಿತ್ರ ೦೩ ಕೆ.ಎಲ್.ಆರ್. ೦೩ : ಕೋಲಾರದ ಡಿ.ಎಫ್.ಓ ಆಗಿದ್ದ ಏಡುಕೊಂಡಲು ಹಾಸನಕ್ಕೆ ವರ್ಗಾವಣೆಗೊಂಡು ನೂತನವಾಗಿ ಕೋಲಾರಕ್ಕೆ ಆಗಮಿಸಿರುವ ಡಿ.ಎಫ್.ಓ. ಸರೀನಾ ಸಿಕ್ಕಲಿಗರ್ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.