ಸರಗೂರು: ನುಗು ಜಲಾಶಯದಿಂದ ಬೇಸಿಗೆ ಬೆಳೆ ಭತ್ತಕ್ಕೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.
ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಗು ಜಲಾಶಯಕ್ಕೆ ಸೇರಿದ ವಸತಿಗೃಹದಲ್ಲಿ ಮಂಗಳವಾರ ನುಗು ಜಲಾಶಯ ಬಲೆದಂಡೆ, ಎಡದಂಡೆ ನಾಲೆಗಳಿಗೆ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು.
ಜಲಾಶಯದಲ್ಲಿ 106 ಅಡಿ ನೀರು ಸಂಗ್ರಹಣೆಯಾಗಿದೆ. ಅದರೆ ಕಳೆದ ಬಾರಿ ಜಲಾಶಯದಲ್ಲಿ 98 ಆಡಿ ನೀರು ಇದ್ದಾಗಲೂ ಭತ್ತ ಬೆಳೆಯುವ ನೀರು ಹರಿಸಲಾಗಿದೆ. ಹೀಗಾಗಿ ಬೇಸಿಗೆಯಲ್ಲಿ ನೀರು ಹರಿಸುವ ವಿಚಾರದಲ್ಲಿ ನ್ಯಾಯ ಮಂಡಳಿಗೆ ಹೋಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದರು.
ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯದಲ್ಲಿ ನೀರು ತುಂಬಿದೆ. ಹೀಗಾಗಿ ಇರುವ ನೀರಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಯಪಾಲಕ ಎಂಜಿನಿಯರ್ ಎ.ಬಿ.ರಾಜು, ಮಾತನಾಡಿ, ಮಾರ್ಚ್-ಎಪ್ರಿಲ್ ತಿಂಗಳಲ್ಲಿ ದನಕರುಗಳಿಗೆ ನೀರು ಅಗತ್ಯವಿರುವುದರಿಂದ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ಮಾತ್ರ ನೀರು ಹರಿಸಲಾಗುವುದು. ಬೇಸಿಗೆ ಬೆಳೆಗೆ ನೀರು ಬಿಟ್ಟರೆ ಜೂನ್ ತಿಂಗಳಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗುತ್ತದೆ ಎಂದರು.
ಬಿಜೆಪಿ ಮುಖಂಡ ಸಿ.ಕೆ. ಗಿರೀಶ್, ಮಾಜಿ ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯಕ ಮಾತನಾಡಿದರು. ಮುಳ್ಳೂರು ಗ್ರಾ.ಪಂ. ಅಧ್ಯಕ್ಷ ಗೋವಿಂದಚಾರಿ, ಮಾಜಿ ಜಿ.ಪಂ. ಸದಸ್ಯ ಚಿಕ್ಕವೀರನಾಯಕ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬೀರ್ವಾಳು ಬಸವರಾಜು, ಉಪಾಧ್ಯಕ್ಷ ಬಿರ್ವಾಳು ಚಿಕ್ಕಣ್ಣ, ನಂಜನಗೂಡು ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ್, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕಲ್ಲಂಬಾಳು ನಾಗಣ್ಣ, ಬಿಳಿಗಿರಿನಿಯಕ, ವಾಣಿ, ರವಿಕುಮಾರ್, ಶಿವಚನ್ನ, ಕಾರ್ಯಪಾಲಕ ಎಂಜಿನಿಯರ್ ರಾಜು, ರೈತ ಮುಖಂಡರು ಭಾಗಿಯಾಗಿದ್ದರು.