ನ್ಯೂಸ್

ನೀರಾವರಿಗಾಗಿ ಜೈಲು, ಸಾಯಲು ಸಿದ್ಧ

ಚಿತ್ರದುರ್ಗ: ಬೇರೆ ಕಾಮಗಾರಿಗಳು ಮಾತ್ರ ಚೆನ್ನಾಗಿಯೇ ನಡೆಯುತ್ತೆ. ಆದರೆ, ನೀರಾವರಿಗ್ಯಾಕೆ ಅಸಡ್ಡೆ. ಸತ್ತರೆ ಇಲ್ಲೇ ಪ್ರಾಣ ಬಿಡ್ತೀವಿ. ಭದ್ರಾ ನೀರು ಹರಿಯದೆ ಇಲ್ಲಿಂದ ಕದಲುವುದಿಲ್ಲ…

ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಜಿಪಂನ ಕೇಂದ್ರ ಸಚಿವರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಭಾನುವಾರ ಸಚಿವ ಎ.ನಾರಾಯಣಸ್ವಾಮಿ ಮುಂದೆ ಆಕ್ರೋಶ ಹೊರಹಾಕಿದ ಪರಿ ಇದು.

ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಮಾತನಾಡಿ, ಈ ಯೋಜನೆಗೆ ಪ್ರಧಾನಿ ನರೇಂದ್ರಮೋದಿ ಅವರು 5,300 ಕೋಟಿ ರೂ. ನೀಡುವುದಾಗಿ ಚಿತ್ರದುರ್ಗದಲ್ಲೇ ಭರವಸೆ ನೀಡಿದ್ದರು. ಕಳೆದ ಬಜೆಟ್‌ನಲ್ಲೂ ಘೋಷಿಸಲಾಯಿತು. ಆದರೆ, ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮೇಲಿಂದ ಮೇಲೆ ಸುಳ್ಳು ಹೇಳುತ್ತಿದ್ದು, ಮತ್ತೊಮ್ಮೆ ನಂಬಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಭದ್ರಾ ಬರದಿದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡ್ತೀವಿ. ನಿಮ್ಮ ಪಕ್ಷದವರನ್ನು ಮನೆಗೆ ಕಳ್ಸೋವರೆಗೂ ಅಭಿಯಾನ ನಡೆಸುತ್ತೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಜೊತೆಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯ ಜನ ತಮಗೆ ಅಧಿಕಾರ ಕೊಟ್ಟಿದ್ದಾರೆ. ಬರ ನೀಗಿಸುವ ಕಾರ್ಯದಲ್ಲಿ ಸರ್ಕಾರಗಳು ಸೇರಿ ನೀವು ವಿಫಲರಾಗಿದ್ದೀರಿ. ಸಮಗ್ರ ನೀರಾವರಿ ಯೋಜನೆಗೆ ವೇಗ ನೀಡಬೇಕು. ಅದಕ್ಕಾಗಿ ಒಂದು ವಾರದಿಂದ ಇಲ್ಲಿ ಧರಣಿ ನಡೆಸುತ್ತಿದ್ದು, ನೀರು ಹರಿಸದಿದ್ದರೆ, ಜೈಲಲ್ಲಿರ್ತೀವೋ.. ಸಾಯುತ್ತೇವೋ.. ಇಲ್ಲೇ ಹೋರಾಡುತ್ತೇವೆ ಎಂದು ಎಚ್ಚರಿಸಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರೈತರ ಮಾತು ಆಲಿಸಿದ ನಂತರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ, ರಾಜ್ಯ ಸರ್ಕಾರ ಅನುದಾನ ನೀಡುವುದು ಒಂದು ಕಡೆ ಇರಲಿ. ನಿಮ್ಮನ್ನು ಪಿಎಂ, ಸಿಎಂ ಭೇಟಿಗೂ ದಿನಾಂಕ ನಿಗದಿಪಡಿಸಿ ಕರೆದುಕೊಂಡು ಹೋಗಲು ಸಿದ್ಧನಿದ್ದೇನೆ ಎಂದರು.

ಈಗಾಗಲೇ ಬಜೆಟ್ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಕ್ಲಿಯರೆನ್ಸ್ಗೆ ಇನ್ನು ಒಂದು ವರ್ಷ ಆಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿ ಇರುವ ವೈ ಜಂಕ್ಷನ್ ಸಮಸ್ಯೆ ರಾಜ್ಯ ಸರ್ಕಾರ ರೈತರೊಂದಿಗೆ ಚರ್ಚಿಸಿ, ಇತ್ಯರ್ಥಪಡಿಸಲು ಮುತುವರ್ಜಿ ತೋರಬೇಕು. ಆಗ ಮಾತ್ರ ಅಲ್ಲಿಂದ ನೀರು ಪಂಪ್ ಮಾಡಿಕೊಳ್ಳಲು ತೊಂದರೆ ಆಗಲ್ಲ ಎಂದು ಹೇಳಿದರು.

ಶೇ 40ರಷ್ಟು ಹನಿ ನೀರಾವರಿಗೆ ಕ್ರಮವಹಿಸಲಾಗುತ್ತಿದೆ. ಕೆರೆ ತುಂಬಿಸೋಕೆ ಅಷ್ಟು ಹಣ ಬೇಕಾಗಲ್ಲ. ಕೇಂದ್ರ ಘೋಷಿಸಿರುವ ಅನುದಾನ ಕೃಷಿ ಸಿಂಚಾಯಿ ಯೋಜನೆಯಡಿ ರೈತರ ಹೊಲಗಳಿಗೆ ಡ್ರಿಪ್ ಇರಿಗೇಶನ್‌ಗೆ ಬಳಸಬಹುದೇ ಹೊರತು ಇದೇ ಯೋಜನೆಯ ಅನ್ಯ ಕಾಮಗಾರಿಗೆ ಉಪಯೋಗಿಸುವಂತಿಲ್ಲ. ಈ ಸಂಬಂಧ ದಾಖಲೆ ನೀಡಿದರೆ, ಕೇಂದ್ರ ಹಂತ-ಹಂತವಾಗಿ ಅನುದಾನ ನೀಡಲಿದೆ ಎಂದು ಮಾಹಿತಿ ನೀಡಿದರು.

ಎಂಎಲ್ಸಿ ಕೆ.ಎಸ್‌.ನವೀನ್‌, ಜಿಲ್ಲಾ ನೀರಾವರಿ ಹೋರಾಟ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತಸಂಘದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಕೆ.ಟಿ.ತಿಪ್ಪೇಸ್ವಾಮಿ, ಸತೀಶ್, ಚಿತ್ತಯ್ಯ, ಕಬ್ಬಿಗೆರೆ ನಾಗರಾಜ್, ಮಂಜುನಾಥ್, ರಾಮರೆಡ್ಡಿ, ಬಸವರಾಜಪ್ಪ, ಬಸವಶಿವನಕೆರೆ ಶಿವಮೂರ್ತಿ, ಕೊಟ್ರಬಸಪ್ಪ, ನಿಜಲಿಂಗಪ್ಪ, ಜಿ.ಎಸ್.ಚಂದ್ರಮೌಳಿ, ಜಯಣ್ಣ, ಶ್ರೀನಿವಾಸ್, ರಘು, ಇಂಧುದರ, ಪ್ರಸನ್ನ ಇತರರಿದ್ದರು.