ಸರಗೂರು: ಹೊಸ ಬಿದರಹಳ್ಳಿ ಗ್ರಾಮದಲ್ಲಿನ 30 ಎಕರೆ ಗ್ರಾಮಠಾಣಾ ಜಾಗವನ್ನು ನಿವೇಶನ ವಂಚಿತರಿಗೆ ಹಂಚಲು ಶೀಘ್ರ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಸೂಚನೆ ನೀಡಿದರು.
ತಾಲೂಕಿನ ಹೊಸ ಬಿದರಹಳ್ಳಿ ಗ್ರಾಮ ಪಂಚಾಯಿತಿ ಶನಿವಾರ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮದಲ್ಲಿ 79 ಎಕರೆ ಗ್ರಾಮಠಾಣಾ ಜಾಗದ ಪೈಕಿ 40 ಎಕರೆಯಲ್ಲಿ ಗ್ರಾಮಸ್ಥರು ವಾಸಿಸುತ್ತಿದ್ದು, 8 ಎಕರೆಯಲ್ಲಿ ಅಂಬೇಡ್ಕರ್ ವಸತಿ ಶಾಲೆ ನಿರ್ಮಿಸಲು ಗುರುತಿಸಲಾಗಿದೆ. 1 ಎಕರೆಯನ್ನು ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದೆ. ಇನ್ನುಳಿದ 30 ಎಕರೆ ಜಾಗವನ್ನು ಗ್ರಾಮದಲ್ಲಿ ನಿವೇಶನ ವಂಚಿತರಾದವರಿಗೆ ಹಂಚಬೇಕಿದೆ. ಇದಕ್ಕಾಗಿ ಒಂದು ವಾರದೊಳಗೆ ಅಧಿಕಾರಿಗಳು ಸೂಕ್ತ ದಾಖಲಾತಿಗಳನ್ನು ತಯಾರಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದಲ್ಲದೆ ಬಿದರಹಳ್ಳಿ ವೃತ್ತದಲ್ಲಿರುವ ನಿವಾಸಿಗಳಿಗೆ ನೀರಾವರಿ ಇಲಾಖೆಯಿಂದಲೂ 2 ಎಕರೆ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲೇ ಹಂಚಿಕೆ ಮಾಡಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಮುಖಂಡ ಅಂಕನಾಯಕ ಮಾತನಾಡಿ, ಗ್ರಾಮದಲ್ಲಿ 12 ಎಕರೆ ಕೆರೆ ಒತ್ತುವರಿಯಾಗಿದೆ. ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಇದರಿಂದಾಗಿ ಇಬ್ಬರು ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ ಎಂದರು. ಇದಲ್ಲದೆ ಗ್ರಾಮದ ಹತ್ತಾರು ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ತಾಲೂಕು ಪಂಚಾಯಿತಿ ಇಒ ಕೆ.ಸುಷ್ಮಾ, ಕೋರ್ಟ್ ಕೇಸು ಮುಗಿದ ಬಳಿಕ ಕೆರೆ ಅಭಿವೃದ್ಧಿಗೊಳಿಸಲು ಪಂಚಾಯಿತಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು ರೈತರಿಗೆ ಸಾಗುವಳಿ ಪತ್ರ ವಿತರಿಸಿದರು. ರಸ್ತೆ ಸಮಸ್ಯೆ, ಸಾಗುವಳಿ ಪತ್ರ, ಪಿಂಚಣಿ ಸಮಸ್ಯೆ, ವಿದ್ಯುತ್ ಸಂಪರ್ಕ, ಮಳೆಹಾನಿಯಿಂದಾದ ಮನೆ ಮಂಜೂರು ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರಿಗೆ ಅರ್ಜಿ ಸಲ್ಲಿಸಿದರು. ಶಾಸಕರು ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ವೆಂಕಟಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಚಿಕ್ಕವೀರನಾಯಕ, ತಹಸೀಲ್ದಾರ್ ಚೆಲುವರಾಜು, ತಾಪಂ ಇಒ ಕೆ.ಸುಷ್ಮಾ, ಸದಸ್ಯರಾದ ಚನ್ನನಾಯಕ, ಶಿವಣ್ಣ, ಅಂಕನಾಯಕ, ಸತ್ಯ, ತಿಮ್ಮಪ್ಪ, ವಿಜಯ್‌ಕುಮಾರ್, ರತ್ನಮ್ಮ, ನಾಗರತ್ನ, ಪಿಡಿಒ ಕೆ.ಪರಮೇಶ್, ಅಧಿಕಾರಿಗಳಾದ ಸಿಡಿಪಿಒ ಆಶಾ, ಬಿಒ ಉದಯ್‌ಕುಮಾರ್, ಕೃಷಿ ಅಧಿಕಾರಿ ರಂಗಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ನೀರಾವರಿ ಇಲಾಖೆಯ ರಮೇಶ್‌ಬಾಬು, ಎಡಿಎಲ್‌ಆರ್ ಜಗನ್ನಾಥ್, ಸಿಬ್ಬಂದಿ ವಿನೋದ್, ಕಬಿನಿ ಹೇಮಂತ್, ಶಾಸಕ ಆಪ್ತ ಸಹಾಯಕ ಮಂಜುನಾಥ್, ಸುದರ್ಶನ್, ಹೇಮಂತ್, ಸಿದ್ದರಾಮು, ಬಸವರಾಜು ಕಳಸೂರು ಹಾಜರಿದ್ದರು.