ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದಲ್ಲಿನ ವಸತಿ ರಹಿತರಿಗೆ ನಿವೇಶನ ನೀಡಲು ಒಂದೂವರೆ ತಿಂಗಳಿನಿಂದ ಜಮೀನು ಗುರುತಿಸುವಿಕೆ ಹಾಗೂ ಮಂಜೂರಾತಿ ವಿಶೇಷ ಅಭಿಯಾನ ಕೈಗೊಂಡಿದ್ದು ಸದ್ಯದಲ್ಲೇ ಅರ್ಹ ಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಗ್ರಾಮೀಣ ವಸತಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ಪ್ರತಿ ತಾಲೂಕಿನಲ್ಲಿ ವಸತಿ ಯೋಜನೆಗೆ ಸರ್ಕಾರಿ ಜಮೀನು ಗುರುತಿಸಿದ್ದು, ನಿವೇಶನ ರಹಿತರ ಪಟ್ಟಿಯನ್ನು ಆಯಾ ತಾಪಂಗೆ ನೀಡಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 21,000 ನಿವೇಶನ ರಹಿತರಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ವಸತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ಯಶಸ್ವಿಗೊಳಿಸಲು ಮತ್ತಷ್ಟು ಚುರುಕಾಗಿ ಕಾರ್ಯನಿರ್ವಹಿಸಿ ನಿರ್ದಿಷ್ಟ ಗುರಿ ಸಾಧಿಸುವಂತೆ ತಹಸೀಲ್ದಾರ್, ತಾಪಂ ಇಒಗಳಿಗೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಒಂದು ವಾರದೊಳಗೆ ಮಂಜೂರಾಗಿರುವ ಜಮೀನಿಗೆ ಅನುಗುಣವಾಗಿ ಬಡಾವಣೆಯ ನಕ್ಷೆ ತಯಾರಿಸಬೇಕು. ಫಲಾನುಭವಿಗಳಿಗೆ ಸವಲತ್ತು ಒದಗಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ನಿರ್ದೇಶನ ನೀಡಿದರು.
ಜಮೀನು ಗುರುತು: ಫಲಾನುಭವಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಭೂ ಸ್ವಾಧೀನ ಪಕ್ರಿಯೆ, ನಿವೇಶನ ಹಂಚಿಕೆ, ಫಲಾನುಭವಿಗಳ ಪಟ್ಟಿ, ಕ್ರಿಯಾ ಯೋಜನೆಗೆ ಅನುಮೋದನೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಈಗಾಗಲೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಮೀನು ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ನಂದಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ 41.25 ಎಕರೆ, ಕಸಬಾ ಹೋಬಳಿಯಲ್ಲಿ 63.12 ಎಕರೆ, ಮಂಡಿಕಲ್ಲು ಹೋಬಳಿಯಲ್ಲಿ 46.39 ಎಕರೆ, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯಲ್ಲಿ 82.13 ಎಕರೆ ಸೇರಿ ಒಟ್ಟು 234.09 ಎಕರೆ ಜಮೀನು ಮಂಜೂರು ಮಾಡಲಾಗಿದೆ. 11,766 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಇನ್ನು ಶಿಢ್ಲಘಟ್ಟದಲ್ಲಿ 37 ಎಕರೆ, ಬಾಗೇಪಲ್ಲಿಯಲ್ಲಿ 12 ಎಕರೆ, ಗುಡಿಬಂಡೆಯಲ್ಲಿ 9.20 ಎಕರೆ, ಗೌರಿಬಿದನೂರಿನಲ್ಲಿ 21.30 ಎಕರೆ, ಚಿಂತಾಮಣಿಯಲ್ಲಿ 10 ಎಕರೆ ಜಮೀನು ಗುರುತಿಸಿ, 4525 ನಿವೇಶನಗಳಿಗೆ ಜಮೀನು ಮಂಜೂರು ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.