ನಂಜನಗೂಡು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಅಧ್ಯಯನ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಶಾಸಕ ಬಿ.ಹರ್ಷವರ್ಧನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಗುರುಭವನದಲ್ಲಿ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳ ನಡೆ 625 ಅಂಕಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳೇ ಇಂದು ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿ ಹುದ್ದೆ ಪಡೆಯುತ್ತಿರುವುದು. ನೀವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎಂಬ ಕೀಳರಿಮೆ ಬಿಡಬೇಕು. ವ್ಯಕ್ತಿಯ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಮುಖವಾದ ಘಟ್ಟ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೀವು ವ್ಯಾಸಂಗವನ್ನು ಗಂಭೀರವಾಗಿ ಪರಿಗಣಿಸಿ ಆಸಕ್ತಿಯಿಂದ ಕಷ್ಟಪಟ್ಟು ಓದಿದಾಗ ಮಾತ್ರ ಸಾಧನೆ ಸಾಧ್ಯ. ಆದ್ದರಿಂದ ನೀವು ಕೂಡ ವಿಜ್ಞಾನಿ, ವೈದ್ಯ, ಇಂಜಿನಿಯರ್, ಉಪನ್ಯಾಸಕ ಹೀಗೆ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಓದಿ ಸಾಧನೆ ಮಾಡಲು ಮುಂದಾಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತರಬೇತಿ ಕಾರ್ಯಕ್ರಮ ರೂಪಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರದಲ್ಲಿ ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದಾಗ ಮಾತ್ರ ನನಗೆ ಸಮಾಧಾನ ತರಲಿದೆ. ಆದ್ದರಿಂದ ಈ ಬಾರಿ ಕನಿಷ್ಠ 300 ವಿದ್ಯಾರ್ಥಿಗಳಾದರೂ 600ಕ್ಕಿಂತ ಹೆಚ್ಚು ಅಂಕಗಳಿಸುವಂತೆ ಕ್ರಮವಹಿಸುವುದರ ಜತೆಗೆ ಶ್ರಮಿಸಬೇಕೆಂದು ಬಿಇಒ ರಾಜು ಅವರಿಗೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೋಚಿಂಗ್‌ಕ್ಲಾಸ್, ಟ್ಯೂಷನ್ ಸೌಕರ್ಯ ಇರುವುದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಸುಮಾರು 39 ಸರ್ಕಾರಿ ಶಾಲೆಗಳಿಂದ 162 ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಅವರಿಗೆ ನುರಿತ ಸಂಪನ್ಮೂಲ ಶಿಕ್ಷಕರಿಂದ ಆನ್‌ಲೈನ್ ತರಗತಿಗಳನ್ನು ನಡೆಸಿ ತರಬೇತಿ ನೀಡುವ ಮೂಲಕ 625 ಅಂಕಗಳಿಸಲು ಪ್ರೇರೇಪಿಸಲಾಗುತ್ತಿದೆ. ಶಾಸಕ ಬಿ.ಹರ್ಷವರ್ಧನ್ ಅವರು ತಮ್ಮ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡಿ ಶಾಲೆಗಳ ದುರಸ್ತಿ ಕಾರ್ಯ, ಗ್ರಂಥಾಲಯ, ಹೊಸ ಶಾಲಾ ಕೊಠಡಿ, ಸ್ಮಾರ್ಟ್‌ಕ್ಲಾಸ್ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಿದ್ದಾರೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಹೊರಳವಾಡಿ ಮಹೇಶ್, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ಬಿಆರ್‌ಸಿ ಮಹೇಶ್, ರಮೇಶ್, ಉಪನ್ಯಾಸಕರಾದ ಮಹೇಶ್‌ಅತ್ತಿಖಾನೆ, ಮಹದೇವಮೂರ್ತಿ ಇದ್ದರು.