ಬಂಗಾರಪೇಟೆ ಪಟ್ಟಣದ ಎಸ್​.ಎನ್​.ರೆಸಾರ್ಟ್​ನಲ್ಲಿ ಎಸ್​.ಎನ್​.ಚಾರಿಟಬಲ್​ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಉದ್ಘಾಟಿಸಿದರು.  
ನ್ಯೂಸ್

ನಿರುದ್ಯೋಗ ದೂರ ಮಾಡಲು ಉದ್ಯೋಗ ಮೇಳ

ಬಂಗಾರಪೇಟೆ: ಕ್ಷೇತ್ರದ ನಿರುದ್ಯೋಗಿ ಯುವಕ&ಯುವತಿಯರಿಗೆ ಉದ್ಯೋಗ ಕಲ್ಪಿಸಲು ಎರಡು ತಿಂಗಳಿಗೊಮ್ಮೆ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗ ಸಮಸ್ಯೆ ನೀಗಿಸಲು ಯತ್ನಿಸಲಾಗುವುದು ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಎಸ್​.ಎನ್​.ರೆಸಾರ್ಟ್​ನಲ್ಲಿ ಶುಕ್ರವಾರ ಎಸ್​.ಎನ್​.ಚಾರಿಟಬಲ್​ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಉನ್ನತ ವ್ಯಾಸಂಗ ಮಾಡಿದ್ದರೂ ಸಹ ಪ್ರತಿಭಾವಂತರಿಗೆ ಉದ್ಯೋಗ ಸಿಗದೆ ಪರದಾಡುತ್ತಿದ್ದರು. ಅಂತಹ ಯುವಕ&ಯುವತಿಯರಿಗೆ ಉದ್ಯೋಗ ಒದಗಿಸಲು ಪ್ರತಿಷ್ಠಿತ 28 ಕಂಪನಿಗಳು ಇಂದು ಈ ಮೇಳದಲ್ಲಿ ಭಾಗವಹಿಸಿವೆ. ಪ್ರಚಾರದ ಕೊರತೆಯಿಂದ ತಾಲೂಕಿನ ಹೆಚ್ಚಿನ ಯುವಕ&ಯುವತಿಯರು ಮೇಳದಿಂದ ದೂರ ಉಳಿದಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಚಾರ ಮಾಡಲಾಗುತ್ತದೆ ಎಂದರು.

ಕೆಜಿಎಫ್​ ಬಂಗಾರಪೇಟೆ ನಡುವೆ ಇರುವ ದಾಸರಹೊಸಹಳ್ಳಿ ಬಳಿ 700 ಎಕರೆ ಪ್ರದೇಶದಲ್ಲಿ ಹತ್ತಾರು ಕೈಗಾರಿಕೆಗಳನ್ನು ಸ್ಥಾಪಿಸಿ ಕನಿಷ್ಠ 25ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ಮುಖ್ಯಮಂತ್ರಿಗೆ ನಿರುದ್ಯೋಗಿಗಳ ಮೇಲಿರುವ ಕಾಳಜಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ಉದ್ಯೋಗಿ ಆಕಾಂಕ್ಷಿತರು ಇಂತಹ ಅವಕಾಶವನ್ನು ಬಳಸಿಕೊಂಡು ಸ್ವಾಭಿಮಾನಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಆಂಧ್ರಪ್ರದೇಶ, ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಬಂಗಾರಪೇಟೆ ಪಟ್ಟಣದಲ್ಲಿ ಉದ್ಯೋಗ ಮೇಳವನ್ನು ಪ್ರಥಮ ಬಾರಿಗೆ ಶಾಸಕರು ಹಮ್ಮಿಕೊಂಡಿರುವುದು ಶ್ಲಾನೀಯ. ಉದ್ಯೋಗ ಮೇಳ ಪಟ್ಟಣಕ್ಕೆ ಸೀಮಿತವಾಗದೆ ಹೋಬಳಿ ಕೇಂದ್ರಗಳಲ್ಲಿಯೂ ಆಯೋಜನೆ ಮಾಡಿದರೆ ಅನೇಕರಿಗೆ ಅನುಕೂಲವಾಗಲಿದೆ ಎಂದರು.

ಬಂಗಾರಪೇಟೆ, ಕೆಜಿಎಫ್​ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸರ್ಕಾರದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು ಬರುತ್ತಿರುವುದರಿಂದ ನಿತ್ಯ ಉದ್ಯೋಗಕ್ಕಾಗಿ ಯುವಕರು ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಸಂಸದರನ್ನೂ ಸೇರಿಸಿಕೊಂಡು ಬೃಹತ್​ ಉದ್ಯೋಗ ಮೇಳ ಮಾಡಬೇಕು. ಇದಕ್ಕೆ ವ್ಯಾಪಕ ಪ್ರಚಾರದ ಅಗತ್ಯವಿದೆ. ಇಂದಿನ ಮೇಳಕ್ಕೆ ನಿರೀಕ್ಷಿತ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿಲ್ಲ. ಇದಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ. ಇದು ಮರುಕಳಿಸದಂತೆ ಎಚ್ಚರವಹಿಸಬೇಕು. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ನೂರಾರು ಕಾರ್ಖಾನೆಗಳು ತಲೆ ಎತ್ತಿ ಕಾರ್ಖಾನೆಗಳ ಜಿಲ್ಲೆಯಾಗಿ ಬದಲಾಗಲಿದೆ ಎಂದರು.