ನ್ಯೂಸ್

ನಿರಂತರ ತಾಪಮಾನ ಏರಿಕೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್

ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಾದ್ಯಂತ ಕಳೆದ ಎರಡು ವಾರಗಳಿಂದ ನಿರಂತರವಾಗಿ ತಾಪಮಾನ ಏರಿಕೆಯಾಗುತ್ತಿದೆ. ಬರ ಪರಿಸ್ಥಿತಿಯಿಂದಾಗಿ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ತಾಪಮಾನ ಏರಿಕೆಯೊಂದಿಗೆ ಬಿಸಿ ಗಾಳಿ ಬೀಸುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ತಾಪಮಾನ ಹೆಚ್ಚಳದಿಂದ ಎದುರಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕೋಲಾರ ಸರ್ಕಾರಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ವಿಶೇಷ ಆರು ಹಾಸಿಗೆಗಳ ವಾರ್ಡ್ ತೆರೆಯಲಾಗಿದೆ ಎಂದು ಜಿಲ್ಲಾ ಸರ್ಜನ್ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಪಮಾನ ಹೆಚ್ಚಳದಿಂದ ನವಜಾತ ಶಿಶುಗಳು, ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ನಾಗರೀಕರು ಅತೀ ಬೇಗನೆ ಬಳಲಿದ್ದಾರೆ. ತುರ್ತು ಸಮಯದಲ್ಲಿ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡು ಪ್ರತ್ಯೇಕ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ತುರ್ತು ಸಂದರ್ಭದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ೧೦೮ ಮತ್ತು ಸಹಾಯವಾಣಿ-೧೦೨ ಆಗಿದೆ.

ಸಾಮಾನ್ಯವಾಗಿ ಮನುಷ್ಯನ ದೇಹತೆಯ ಉಷ್ಣತೆಯು ೩೬.೪ ಡಿಗ್ರಿ ಮತ್ತು ೩೭.೨ ಡಿಗ್ರಿಯವರೆಗೆ ಆಗಿರುತ್ತದೆ. ಓಳಾಂಗಣ ಮತ್ತು ಹೋರಾಂಗಣ ಪ್ರದೇಶಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ, ಹೆಚ್ಚಿನ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಅತಿಯಾದ ಉಷ್ಣತೆಯಿಂದ ಈ ಕೆಳಕಂಡ ಸಮಸ್ಯೆಗಳು ಎದುರಾಗುತ್ತವೆ. ತಲೆ ಸುತ್ತುವುದು, ತಲೆ ನೋವು, ಪ್ರಜ್ಞೆ ತಪ್ಪುವುದು, ವಾಕರಿಕೆ ಅಥವಾ ವಾಂತಿಯಾಗುವುದು ಅತಿಯಾದ ಬಾಯಾರಿಕೆ, ಮೂತ್ರವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ ಏರುಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚುತ್ತದೆ. ಕೆಲವು ಸಂದರ್ಭಗಳಲ್ಲಿ ಅತಿಯಾದ ಉಷ್ಣತೆಯಿಂದ ಪಾರ್ಶ್ಚವಾಯು ಉಂಟಾಗಬಹುದು ಎಂದು ತಿಳಿಸಿದ್ದಾರೆ.

ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚು ನೀರನ್ನು ಆಗಾಗ್ಗೆ ಸೇವಿಸಬೇಕು. ಬಾಯಾರಿಕೆಯು ನಿರ್ಜಲೀಕರಣದ ಲಕ್ಷಣವಾಗಿರುತ್ತದೆ. ಪ್ರಯಾಣ ಮಾಡುವ ಸಮಯದಲೂ ್ಲಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿರುತ್ತದೆ.

ಮೌಖಿಕ ಪುನರ್ಜಲೀಕರಣ ದ್ರಾವಣ (ಓಆರ್‌ಎಸ್) ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆಹಣ್ಣಿನ ಶರಬತ್ತು, ಮಜ್ಜಿಗೆ, ಹಣ್ಣಿನ ಜೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸುವುದು ಉತ್ತಮವಾಗಿವೆ.

ಈ ಖುತುಮಾನದಲ್ಲಿ ಲಭ್ಯವಿರುವ ಹಾಗೂ ಹೆಚ್ಚು ನೀರಿನ ಅಂಶಗಳನ್ನು ಹೊಂದಿರುವ ಹಣ್ಣು ಮತ್ತು ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಕಿತ್ತಲೆ, ದ್ರಾಕ್ಷೀ, ಎಳೆನೀರು, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಬೇಕು.

ಶರೀರವನ್ನು ಸುರಕ್ಷಿತವಾಗಿಟ್ಟುಕೊಳ್ಳುಲು ಉತ್ತಮ ಗಾಳಿ ಬೀಸುವ ಹಾಗೂ ತಣ್ಣಗಿರುವ ಪ್ರದೇಶದಲ್ಲಿ ಇರಬೇಕು. ತಿಳಿ ಬಣ್ಣದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಬಿಸಿಲಿನಲ್ಲಿ ಹೊರಹೋಗುವ ಸಂದರ್ಭಗಳಲ್ಲಿ ಛತ್ರಿ, ಟೋಪಿಗಳನ್ನು ಉಪಯೋಗಿಸುವುದು. ಬಿಸಿಲಿನಲ್ಲಿ ನಡೆಯುವ ಸಂದರ್ಭಗಳಲ್ಲಿ ಚಪ್ಪಲಿ ಅಥವಾ ಶೂಗಳನ್ನು ಧರಿಸಬೇಕು.

ತಾಪಮಾನ ಹೆಚ್ಚಳದಿಂದ ನವಜಾತ ಶಿಶುಗಳು, ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು, ಹಿರಿಯ ನಾಗರೀಕರಿಗೆ ಅತೀ ಬೇಗನೆ ಬಳಲುವ ಸಾಧ್ಯತೆ ಇರುವುದರಿಂದ ಆದಷ್ಟು ಬಿಸಿಲಿನ ಸಮಯದಲ್ಲಿ ಹೊರ ಹೋಗುವುದನ್ನು ತಪ್ಪಿಸಬೇಕು ಎಂದು ಡಾ. ವಿಜಯ್ ಕುಮಾರ್ ಸಲಹೆ ನೀಡಿದ್ದಾರೆ.

ಕೋಟ್
ಜಿಲ್ಲೆಗೆ ೬ ಹಾಸಿಗೆಗಳಂತೆ ಪ್ರತಿ ತಾಲ್ಲೂಕಿನಲ್ಲಿಯೂ ವಿಶೇಷವಾಗಿ ೨ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಬಿಸಿಲಿನ ತಾಪಕ್ಕೆ ದಣಿದು ಬೇರೆ ಬೇರೆ ಖಾಯಿಲೆಗಳಿಗೆ ತುತ್ತಾಗಿರುವವರನ್ನು ದಾಖಲಿಸಿಕೊಳ್ಳಲಾಗುವುದು. ಎಸ್.ಎನ್.ಆರ್. ಆಸ್ಪತ್ರೆಗೆ ಹೊಸದಾಗಿ ೯ ಡೆಯಾಲಿಸಿಸ್ ಯಂತ್ರಗಳು ಮತ್ತು ಸಿಬ್ಬಂದಿಯನ್ನು ಹೊಸದಾಗಿ ನೀಡಿದೆ. ನೀತಿ ಸಂಹಿತೆ ಇರುವ ಕಾರಣ ಉದ್ಘಾಟನೆ ಮಾಡದೆ ಕಾರ್ಯ ಆರಂಭಿಸಲಾಗಿದೆ. ಈ ಹಿಂದೆ ೩ ಯಂತ್ರಗಳಿತ್ತು. ಈಗ ೯ ಸೇರಿ ಒಟ್ಟು ೧೧ ಡಯಾಲಿಸಿಸ್ ಯಂತ್ರಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ಇನ್ನು ಮುಂದೆ ಯಾರೂ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಇಲ್ಲ. ನೀತಿ ಸಂಹಿತೆ ಮುಗಿದ ನಂತರ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಪ್ರಚಾರ ನೀಡಲಾಗುವುದು.

-ಡಾ.ವಿಜಯಕುಮಾರ್, ಜಿಲ್ಲಾ ಸರ್ಜನ್, ಎಸ್.ಎನ್.ಆರ್. ಆಸ್ಪತ್ರೆ, ಕೋಲಾರ.

ಚಿತ್ರ ೦೩ ಕೆ.ಎಲ್.ಆರ್. ೦೫ : ಎಸ್.ಎನ್.ಆರ್. ಆಸ್ಪತ್ರೆಯ ಭಾವಚಿತ್ರ
ಚಿತ್ರ ೦೩ ಕೆ.ಎಲ್.ಆರ್. ೦೫ಎ : ಡಾ. ವಿಜಯಕುಮಾರ್, ಜಿಲ್ಲಾ ಸರ್ಜನ್, ಎಸ್.ಎನ್.ಆರ್. ಆಸ್ಪತ್ರೆ, ಕೋಲಾರ.