ಕೊಪ್ಪ ತಾಲೂಕಿನ ಹರಿಹರಪುರ ಪ್ರಬೋಧಿನಿ ಗುರುಕುಲದಲ್ಲಿ ನಡೆದ ನೂತನ ಛಾತ್ರ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಯಡತೊರೆ ಶ್ರೀ ಶಂಕರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್.ಬಿ.ರಾಜಗೋಪಾಲ್, ಡಾ. ಶಿವರಾಮ್, ಉಮೇಶ್ ರಾವ್ ಇದ್ದರು. 
ನ್ಯೂಸ್

ನಿರಂತರ ಕಲಿಕೆಯೇ ಜೀವನ

ಕೊಪ್ಪ: ಗುರುಕುಲದಲ್ಲಿ ಪಕ್ವ ಶಿಕ್ಷಣ ದೊರೆಯಲಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ ಅರ್ಪಿಸಿಕೊಳ್ಳುತ್ತಾರೆ. ಗುರುಕುಲದಲ್ಲಿ ಕಠಿಣ ಶ್ರಮವನ್ನೂ ಕಲಿಸಲಾಗುತ್ತದೆ ಎಂದು ಕೆ.ಆರ್.ಪೇಟೆ ಶ್ರೀ ಯಡತೊರೆ ಯೋಗಾನಂದೇಶ್ವರ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿ ಹೇಳಿದರು.

ಹರಿಹರಪುರ ಪ್ರಬೋಧಿನಿ ಗುರುಕುಲದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೂತನ ಛಾತ್ರ ಪ್ರವೇಶೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ನಿರಂತರ ಕಲಿಕೆಯೇ ಜೀವನ. ಆಚಾರ್ಯ ಶ್ರೀ ಶಂಕರರು ಈ ಯುಗ ಕಂಡ ಮಹಾನ್ ದಾರ್ಶನಿಕರು. ಸೀಮಿತ ಜೀವಿತಾವಧಿಯಲ್ಲಿ ಅವರು ವೇದ ವೇದಾಂತದ ಕುರಿತಾದ ಗ್ರಂಥಗಳನ್ನು ರಚಿಸಿದರು. ಇದಕ್ಕೆ ಕಾರಣ ಅವರ ಸಾಧನೆ ಹಾಗೂ ಪರಿಶ್ರಮ ಎಂದರು.

ಕುಂದುಕೊರತೆಗಳನ್ನು ಕಡೆಗಣಿಸಿ ಸಾಧನೆಯಲ್ಲಿ ನಿರತರಾದಾಗ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುದಕ್ಕೆ ಶ್ರೀ ಶಂಕರ ಭಗವತ್ಪಾದರು ನಮಗೆ ಆದರ್ಶ ಎಂದು ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣ ವಿಭಾಗದ ನಿವೃತ್ತ ಜಂಟಿ ನಿರ್ದೇಶಕ ಟಿ.ಎನ್.ಪ್ರಭಾಕರ್ ಮಾತನಾಡಿ, ಪ್ರಬೋಧಿನಿ ಗುರುಕುಲ ಕಳೆದ 30 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಇಲ್ಲಿ ಅಧ್ಯಯನ ಮಾಡುವವರಿಗೆ ಆಧ್ಯಾತ್ಮಿಕ, ರಾಷ್ಟ್ರೀಯ ಶಿಕ್ಷಣ ನೀಡಲಾಗುತ್ತದೆ. ಪರಿಸರ, ನದಿ, ಹಸು, ಬೆಟ್ಟ ಗುಡ್ಡಗಳ ಜತೆಗೆ ಸಜೀವ ಸಂಬಂಧ ಇಟ್ಟುಕೊಂಡು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇಂದ್ರಿಯಗಳ ಅನುಭವಕ್ಕೆ ಮೀರಿದ ಅಲೌಕಿಕ ಅನುಭೂತಿ ಇಲ್ಲಿ ಸಿಗುತ್ತದೆ ಎಂದರು.

ಸಭಾ ಕಾರ್ಯಕ್ರಮದ ಮೊದಲು ಶ್ರೀಗಳು ಹೊಸದಾಗಿ ಸೇರ್ಪಡೆಯಾದ 19 ವಿದ್ಯಾರ್ಥಿಗಳಿಗೆ ಪ್ರಥಮ ಪಾಠ ನೆರವೇರಿಸಿದರು. ಪ್ರಬೋಧಿನಿ ಟ್ರಸ್ಟ್ ನಿರ್ವಾಹಕ ವಿಶ್ವಸ್ತರಾದ ಎಚ್.ಬಿ.ರಾಜಗೋಪಾಲ್, ಡಾ. ಶಿವರಾಮ್, ಉಮೇಶ್ ರಾವ್ ಇತರರಿದ್ದರು.