ಮೈಸೂರು : ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಸಮಯ ಪಾಲನೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 45 ದಿನಗಳ ಕಾಲದ ಯುಜಿಸಿ-ನೆಟ್, ಕೆ-ಸೆಟ್ ಮತ್ತು ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಎನ್ನುವುದು ಸಾಗರ. ಅದನ್ನು ಈಜಲು ಕಷ್ಟ. ಸಾಧನೆ ಮಾಡಲೇ ಬೇಕು ಎಂದಾಗ ಕ್ರಮವಾಗಿ ಯೋಜನೆ ಮಾಡಿಕೊಂಡು ಗುರಿ ಮುಟ್ಟಬೇಕು. ಈ ಗುರಿಯನ್ನು ಮುಟ್ಟಲು ದೃಢವಾದ ಆತ್ಮವಿಶ್ವಾಸ, ಧೈರ್ಯ, ಏಕಾಗ್ರತೆ, ಮನಸ್ಸಿಟ್ಟು ಅಧ್ಯಯನ ಮಾಡುವ ಕಲೆ, ಸಮಯಪಾಲನೆ, ಶಿಸ್ತು, ಪರಿಶ್ರಮ, ಬರವಣಿಗೆಯ ಕೌಶಲ, ಉತ್ತಮವಾದ ಆರೋಗ್ಯ ಮತ್ತು ನಡವಳಿಕೆ, ಮಾತೃ ಭಾಷೆಯಲ್ಲಿ ಕಲಿತ ವಿಷಯದ ಮನನ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಅಧ್ಯಾಪಕರಾಗುವ ತಮಗೆ ಇತಿಹಾಸ ಮತ್ತು ವಿಜ್ಞಾನದ ಅರಿವಿನ ಜತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಆಯ್ಕೆಗಳಿದ್ದು, ಯಾವುದೇ ಗೊಂದಲಕ್ಕೊಳಗಾಗದೆ ನಮಗೆ ಯೋಗ್ಯ ಮಾರ್ಗ ಆಯ್ಕೆ ಮಾಡಿಕೊಂಡು ಅದರಲ್ಲಿ ಪರಿಶ್ರಮ ಪಟ್ಟರೆ ಜೀವನದಲ್ಲಿ ಮುಂದೆ ಬರಬಹುದು. ಜತೆಗೆ ಇಂತಹ ಪರೀಕ್ಷೆಗಳಲ್ಲಿ ವೈಫಲ್ಯತೆ ಕಂಡಾಗ ಕಂಗಾಲಾಗದೆ ಮತ್ತೇ ಮತ್ತೆ ಪ್ರಯತ್ನಿಸಬೇಕು. ಬೋಧನಾ ಕ್ಷೇತ್ರಕ್ಕೆ ಕಾಲಿರಿಸುತ್ತಿರುವ ನಿಮ್ಮ ಪ್ರಯತ್ನ ಬಹಳ ಮುಖ್ಯವಾದದ್ದು. ನಿಮ್ಮ ಗುರಿ ಸರಿ ಇದ್ದಾಗ ನಿಖರವಾಗಿ ತಲುಪಬಹುದು ಎಂದು ಅವರು ಹೇಳಿದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಕಾಯಕ ನಿಷ್ಠೆ ಬಲುಮುಖ್ಯ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ನೀವು ಆತ್ಮ ವಿಶ್ವಾಸದಿಂದ ಶ್ರಮ ವಹಿಸಿದ್ದಲ್ಲಿ ಪ್ರಾಧ್ಯಾಪಕ ಹುದ್ದೆಯೇ ಅಲ್ಲದೆ ಇನ್ನಿತರ ಹುದ್ದೆ ಪಡೆಯಬಹುದು. ನಾವೆಲ್ಲರೂ ಹೆಚ್ಚಿನ ಪಾಲು ಗ್ರಾಮೀಣ ಭಾಗದಿಂದ ಬಂದವರು. ಕಲಿಕಾ ಮನೋವೃತ್ತಿ ಬಳಸಿಕೊಂಡರೆ ಉತ್ತಮ ಜೀವನ ನಡೆಸಬಹುದು, ಕರಾಮುವಿಯು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡು, ಶೈಕ್ಷಣಿಕ ಡೀನ್ ಪ್ರೊ.ಕಾಂಬ್ಳೆ ಅಶೋಕ್ ಮಾತನಾಡಿದರು. ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.