ನ್ಯೂಸ್

ನಿಯಮ ಉಲ್ಲಂಘನೆ ಸಂಬಂಧ 833 ಪ್ರಕರಣ ದಾಖಲು

ಬೆಂಗಳೂರು: ನಗರದ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ಶುಕ್ರವಾರ ಸಂಚಾರ ನಿಯಮ ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ಹೆಚ್ಚಿನ ದರಕ್ಕೆ ಬೇಡಿಕೆ, ದಾಖಲೆಗಳಿಲ್ಲದೆ ಆಟೋ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 833 ಪ್ರಕರಣ ದಾಖಲಿಸಿದ್ದಾರೆ.
ಚಾಲನಾ ಪರವಾನಗಿ(ಡಿಎಲ್) ಇಲ್ಲದೆ ಆಟೋ ಚಾಲನೆ ೩, ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ೨೧೩, ಕರೆದಲ್ಲಿಗೆ ಬಾಡಿಗೆ ಹೋಗಲು ನಿರಾಕರಿಸುವುದು ೨೩೪, ಇತರೆ ನಿಯಮ ಉಲ್ಲಂಘನೆ ೩೮೩ ಸೇರಿದಂತೆ ಒಟ್ಟು ೮೩೩ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕೆಲವು ಆಟೋರಿಕ್ಷಾ ಚಾಲಕರು ಡಿಎಲ್ ಇಲ್ಲದೆ ಆಟೋ ಚಾಲನೆ ಮಾಡುವುದು, ನಿಗದಿತ ಬಾಡಿಗೆ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸುವುದು, ಕರೆದಲ್ಲಿಗೆ ಬಾಡಿಗೆಗೆ ಹೋಗಲು ನಿರಾಕರಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪಶ್ಚಿಮ ವಿಭಾಗದ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ಮುಂದುವರಿಯಲಿದೆ:
ಇದೇ ವೇಳೆ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಆಟೋ ಚಾಲಕರಿಗೆ ಅರಿವು ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.