ಬೆಂಗಳೂರು: ನಿಧಿಯ ಆಸೆಗಾಗಿ ತನ್ನ ಮಗುವನ್ನು ಹತ್ಯೆಗೆ ಮುಂದಾದ ಪತಿಯ ವಿರುದ್ಧ, ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸದ್ದಾಂ ಹುಸೇನ್ ಅಲಿಯಾಸ್ ಆದಿ ಈಶ್ವರ್ ಪುತ್ರನ ಹತ್ಯೆಗೆ ಸಂಚು ರೂಪಿಸಿದವ. ಈ ಸಂಬಂಧ ಆತನ ಪತ್ನಿ ವನಜಾಕ್ಷಿ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ಮಂಗಳವಾರ ದೂರು ನೀಡಿದ್ದಾರೆ.
೨೦೨೦ ರಲ್ಲಿ ಬ್ಲೂಡಾರ್ಟ್ ಕಂಪನಿಯಲ್ಲಿ ಕೆಲಸ ಮಾಡುವಾಗ ಸದ್ದಾಂ ಹುಸೇನ್‌ನ ಪರಿಚಯವಾಗಿತ್ತು. ಈ ವೇಳೆ ಆತ ಪ್ರೇಮ ನಿವೇದನೆ ಮಾಡಿಕೊಂಡು, ಮದುವೆಯಾಗುವುದಾಗಿ ಒತ್ತಾಯಿಸಿದ್ದ. ನಂತರ ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ೨೦೨೦ರ ನವೆಂಬರ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ಒತ್ತಾಯಿಸಿದ್ದ. ನಂತರ ಆರೋಪಿ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಪತಿಯ ಸಹಚರನಾದ ಕುಂಟ ನಯಾಜ್, ಇಸ್ಲಾಂ ಧರ್ಮಕ್ಕೆ ಮತಾಂತರವಾಗವಂತೆ ನನಗೆ ಒತ್ತಾಯಿಸಿದರು. ಅಲ್ಲಿ ಸಾದಿಯಾ ಕೌಸರ್ ಎಂದು ನನಗೆ ಮರುನಾಮಕರಣ ಮಾಡಿದರು. ಮುಸ್ಲಿಂ ವಿವಾಹ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲ ತಿಂಗಳ ಬಳಿಕ ನಾನು ಗರ್ಭಿಣಿಯಾದೆ. ಆಗ ಸದ್ದಾಂ ನನ್ನ ಮೇಲೆ ಹಲ್ಲೆ ಮಾಡಿದ್ದನು. ಅಲ್ಲದೇ ನನ್ನ ತಾಯಿಗೂ ಜೀವ ಬೆದರಿಕ ಹಾಕಿದ್ದ. ೨೦೨೧ರ ಜುಲೈ ೧೫ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಮಗನಿಗೆ ಕರಣ್ ರಾಜ್ ಎಂದು ನಾಮಕರಣ ಮಾಡಲಾಗಿತ್ತು.
ಮಗು ಅಪಹರಿಸಲು ಯತ್ನ:
ಈ ಮಧ್ಯೆ ಪತಿ ಸದ್ದಾಂ ಹುಸೇನ್, ಕೇರಳದ ಕೆಲ ವ್ಯಕ್ತಿಗಳ ಜತೆ ಸೇರಿ ವಾಮಾಚಾರ ಮಾಡುವುದನ್ನು ಕಲಿತುಕೊಂಡಿದ್ದ. ನಂತರ ನಿಧಿಗಾಗಿ ಕುಟ್ಟಿಪೂಜೆ ಎಂಬ ಮಾಟಮಂತ್ರ ಮಾಡಲು ತಯಾರಿ ನಡೆಸಿದ್ದ. ಈ ವೇಳೆ ತನ್ನ ಮಗನನ್ನು ಬಲಿಕೊಡುವುದಾಗಿ ಹೇಳಿದ್ದ. ಅಲ್ಲದೇ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಬಳಿಕ, ಇದೇ ವರ್ಷ ಅ.೧೩ ರಂದು ಆರೋಪಿ, ತನ್ನ ಸಹಚರ ನಯಾಜ್ ತುಮಕೂರಿನ ನನ್ನ ನಿವಾಸದ ಬಳಿ ಬಂದು, ನನ್ನ ಮಗನನ್ನು ಅಪಹರಿಸಲು ಯತ್ನಿಸಿದ್ದಾನೆ. ಆದರೆ, ಪಕ್ಕದಲ್ಲಿದ್ದ ಮನೆಯವರ ಸಹಾಯದಿಂದ ನಾನು ಮತ್ತು ನನ್ನ ಮಗ ತಪ್ಪಿಸಿಕೊಂಡಿದ್ದೇವೆ. ಈ ಘಟನೆಯ ನಂತರ ನಾನು ಭಯಗೊಂಡು, ತಲೆಮರಿಸಿಕೊಂಡಿದ್ದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ದೂರು ಸ್ವೀಕರಿಸಲಿಲ್ಲ:
ತನಗೆ ಆದ ಅನ್ಯಾಯದ ಬಗ್ಗೆ ಕೆ.ಆರ್. ಪುರ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ದೂರನ್ನು ಸ್ವೀಕರಿಸಿಲ್ಲ. ಆದ್ದರಿಂದ, ಕೂಡಲೇ ಪ್ರಕರಣ ದಾಖಲಿಸಿಕೊಂಡು ಪತಿ ಸದ್ದಾಂ ಹುಸೇನ್ ಮತ್ತು ಆತನ ಸಹಚರ ನಯಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಒಂದು ವೇಳೆ ನಮ್ಮ ಕುಟುಂಬಕ್ಕೆ ಏನಾದರೂ ತೊಂದರೆ ಉಂಟಾದರೆ ಅದಕ್ಕೆ ಸದ್ದಾಂ ಹುಸೇನ್ ಕಾರಣ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.