ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಚಿಂತಾಮಣಿ ತಾಲೂಕಿನ ವೈಜಕೂರಿನಲ್ಲಿ ಬೆಳ್ಳಂಬೆಳಿಗ್ಗೆ ಕಲ್ಲು ಚಪ್ಪಡಿಯ ಮನೆಯ ಕುಸಿದು ತಂದೆ ಮಗ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ತಾಯಿ, ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಲ್ಲಿನ ಕೈವಾರದ ಪೋಸ್ಟ್ ಮೆನ್ ರವಿಕುಮಾರ್ (40) ಮತ್ತು ಇವರ ಮಗ ರಾಹುಲ್ (12) ಮೃತರು. ಪತ್ನಿ ರಾಧಮ್ಮ (35), ಮಗಳು ರುಚಿತಾ (14) ಗಂಭೀರವಾಗಿ ಗಾಯಗೊಂಡಿದ್ದಾರೆ. ಮಳೆಗೆ ಕಲ್ಲು ಚಪ್ಪಡಿಯ ಮನೆಯ ಗೋಡೆ ಬಿರುಕು ಬಿಟ್ಟು ಶುಕ್ರವಾರ ಬೆಳ್ಳಂಬೆಳಿಗ್ಗೆ ಕುಸಿದು ಬಿದ್ದಿದೆ. ಇದೇ ವೇಳೆ ಕುಟುಂಬದ ಸದಸ್ಯರು ನಿದ್ದೆಯ ಮಂಪರಿನಲ್ಲಿದ್ದರು. ಇದರಿಂದ ಎಚ್ಚೆತ್ತುಕೊಳ್ಳಬೇಕೆನ್ನುವಷ್ಟರಲ್ಲಿ ದುರ್ಘಟನೆ ಸಂಭವಿಸಿದೆ. ತಕ್ಷಣ ಸ್ಥಳೀಯರು ಪೊಲೀಸರ ನೆರವಿನೊಂದಿಗೆ ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ರಾಧಮ್ಮ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರ ನಡುವೆ ಹಲವು ಗ್ರಾಮಗಳು ಸಂಪರ್ಕಕವನ್ನು ಕಳೆದುಕೊಂಡಿವೆ. ಕೋಳಿ ಫಾರಂ ಸೇರಿ ಹಲವು ಮನೆಗಳು ಕುಸಿದು ಬಿದ್ದು ನಷ್ಟ ಉಂಟಾಗಿದೆ.