ನ್ಯೂಸ್

ನಿಡಘಟ್ಟ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಭೇಟಿ

ಮದ್ದೂರು: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹಾಗೂ ಅಧಿಕಾರಿಗಳು ಜಿಲ್ಲೆಯ ಗಡಿ ಭಾಗ ತಾಲೂಕಿನ ನಿಡಘಟ್ಟ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಕ್‌ಪೋಸ್ಟ್‌ಗೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಅವರು ಸುಮಾರು 1 ಗಂಟೆ ಕಾಲ ಹೆದ್ದಾರಿ ವಾಹನಗಳನ್ನು ಖುದ್ದು ತಡೆದು ಪರಿಶೀಲನೆ ಮಾಡಿದರು. ವಾಹನಗಳ ಓಡಾಟ, ದಾಖಲು ಪುಸ್ತಕ, ತಪಾಸಣಾ ಕಾರ್ಯ ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಚೆಕ್‌ಪೋಸ್ಟ್‌ಗೆ ನಿಯೋಜಿತರಾಗಿರುವ ಅಧಿಕಾರಿಗಳಿಂದ ಮಾಹಿತಿ ಪಡೆದರು.


ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತದಾರರಿಗೆ ಆಮಿಷ ಒಡ್ಡುವಂತಹ ವಸ್ತುಗಳು ಕಂಟೈನರ್ ವಾಹನಗಳಲ್ಲಿ ಸರಬರಾಜು ಆಗುವ ಸಾಧ್ಯತೆಗಳು ಇವೆ. ಹೀಗಾಗಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸಿದ ನಂತರವೇ ಸಂಚಾರಕ್ಕೆ ಅನುಮತಿಸಬೇಕು ಎಂದರು.


ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಚೆಕ್‌ಪೋಸ್ಟ್‌ನಲ್ಲಿ 24* 7 ಅವಧಿಯಲ್ಲಿ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಇನ್ನು ಚೆಕ್‌ಪೋಸ್ಟ್ ತೆರೆದಾಗಿನಿಂದ ಇಲ್ಲಿಯವರೆಗೂ ತಪಾಸಣೆ ವೇಳೆ ಹಲವು ಬಾರಿ ಅಪಘಾತಗಳು ಸಂಭವಿಸಿದ್ದವು. ಚುನಾವಣೆ ಸಿಬ್ಬಂದಿ ಭಯಭೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಎದುರಾಗಿದೆ. ಹೀಗಾಗಿ ರಸ್ತೆಗೆ ಅಡ್ಡಲಾಗಿ ಮತ್ತಷ್ಟು ಬ್ಯಾರಿಕೇಡ್, ಸಿಗ್ನಲ್‌ಲೈಟ್‌ಗಳನ್ನು ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಚುನಾವಣಾಧಿಕಾರಿ ಆರ್.ನಾಗರಾಜ್, ಸಹಾಯಕ ಚುನಾವಣಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್, ಸಬ್ ಇನ್ಸ್‌ಪೆಕ್ಟರ್ ಸಿದ್ದರಾಜು, ನಿರ್ಮಿತಿ ಕೇಂದ್ರದ ಚೀಫ್ ಇಂಜಿನಿಯರ್ ನರೇಶ್, ಚೆಕ್‌ಪೋಸ್ಟ್ ಮುಖ್ಯಸ್ಥ ಮಂಜುನಾಥ್, ಪವನ್ ಇದ್ದರು.