ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ರೂವಾರಿ ಎಸ್. ನಿಜಲಿಂಗಪ್ಪ ಹಾಗೂ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಜೀವನ- ಸಾಧನೆಯನ್ನು ಶಾಲೆಯ ಪಠ್ಯದಲ್ಲಿ ಸೇರಿಸಬೇಕು ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಆಗ್ರಹಿಸಿದ್ದಾರೆ.
ಶ್ರೀ ಎಸ್. ನಿಜಲಿಂಗಪ್ಪ ಬಳಗವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಸ್. ನಿಜಲಿಂಗಪ್ಪ 25ನೇ ಸಂಸ್ಮರಣೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಹಾಗೂ ಕೆಂಗಲ್ ಹನುಮಂತಯ್ಯ ಅವರ ದೂರದೃಷ್ಟಿ, ಜೀವನ ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಅವರ ಕುರಿತ ಮಾಹಿತಿಯನ್ನು ಪ್ರೌಢಶಾಲೆಯ ಪಠ್ಯದಲ್ಲಿ ಸೇರಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಜಯಂತಿ ಆಚರಣೆ: ರಾಜಕೀಯದಲ್ಲಿ ಎಂದೂ ಓಲೈಕೆ ಮಾಡದ ನಿಜಲಿಂಗಪ್ಪ ಬದ್ಧತೆ ಹೊಂದಿದ್ದ ವ್ಯಕ್ತಿ. ತಮ್ಮ ಅಧಿಕಾರವಧಿಯಲ್ಲಿ ಕರ್ನಾಟಕದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಜನಪರ ಯೋಜನೆಗಳನ್ನು ನೀಡಿದವರು. ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿ, ಬೆಂಗಳೂರು ವಿವಿ ಹಾಗೂ ಕೃಷಿ ವಿವಿ ಸ್ಥಾಪಿಸಿದ್ದರು. ಬೆಂಗಳೂರು ಸಕ್ಕರೆ ಕಾರ್ಖಾನೆ, ಕಾರವಾರ ಮತ್ತು ಮಂಗಳೂರು ಬಂದರು ನಿರ್ಮಾಣ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ಸ್ಥಾಪನೆ ಸೇರಿ ಹಲವು ಯೋಜನೆಗಳು ಅವರ ಕಾಲದ ಮಹತ್ತರ ಕೊಡುಗೆಗಳು. ಹಾಗಾಗಿ ಅವರ ಜಯಂತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಪ್ರತಿಷ್ಠಾನ ಸ್ಥಾಪಿಸಬೇಕು: ನಿಜಲಿಂಗಪ್ಪ ಅವರೊಬ್ಬ ಉತ್ತಮ ರಾಜಕೀಯ ಮತ್ಸದ್ಧಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ಹೋರಾಟಗಾರ, ಅಖಂಡ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದರು. ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಸ್ಮರಣೀಯ. ಸರಳತೆ, ಪ್ರಾಮಾಣಿಕತೆ, ಜನಪರ ಕಾಳಜಿಯ ನಿಸ್ವಾರ್ಥ ಸೇವೆಗೆ ದೊಡ್ಡ ಮಾದರಿಯಾಗಿರುವ ನಿಜಲಿಂಗಪ್ಪ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿ, ಅವರ ಕೊಡುಗೆಗಳು ಹಾಗೂ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ್ ಹೇಳಿದರು.
ಸಾಹಿತಿ ಡಾ. ಹಂಪ ನಾಗರಾಜಯ್ಯ ಮಾತನಾಡಿ, ನಿಜಲಿಂಗಪ್ಪ ರಾಜಕಾರಣಿಯಾಗಿದ್ದರೂ, ಅವರು ಸಾಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅವರೊಬ್ಬ ವಾತ್ಸಲ್ಯಮಯಿಯಾಗಿದ್ದರು ಎಂದು ಸ್ಮರಿಸಿದರು.
ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ, ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಇತರರಿದ್ದರು.