ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂಗೊಳಿಸುವ ಜೊತೆಗೆ ಮೊಟ್ಟೆ, ಗ್ಯಾಸ್, ಬಾಡಿಗೆ ಹಣವನ್ನು ನಿಗದಿತ ಸಮಯಕ್ಕೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು,
ನಗರದ ಪಾಲಸಂದ್ರಲೇಔಟ್ ಕಛೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಿತಿ ಸಭೆಯ ನಂತರ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ ಸರ್ಕಾರದ ಪ್ರತಿಯೊಂದು ಯೋಜನೆಯು ಅನುಷ್ಠಾನಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಬೇಕಾಗಿದೆ. ಆದರೆ ಅವರಿಗೆ ಸೌಲಭ್ಯಗಳನ್ನು ಒದಗಿಸಲು ಮಾತ್ರ ಸರ್ಕಾರವು ಹಿಂದೆ ಬಿದ್ದಿದೆ. ನೌಕರರ ಮತ್ತು ಸಿಬ್ಬಂದಿಯ ಯೋಗಕ್ಷೇಮಕ್ಕೆ ಅನುದಾನವನ್ನು ಕೊಡದೇ ನಿರ್ಲಕ್ಷ ವಹಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರಿಗೆ ಮೊಟ್ಟೆ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಬಾಡಿಗೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡದೆ ಪ್ರತಿ ತಿಂಗಳು ಕಾರ್ಯಕರ್ತೆಯರು ಕೈಯಿಂದ ಭರಿಸುವಂತಾಗಿದೆ. ಇದರಿಂದ ಸಾಕಷ್ಟು ತೊಂದರೆಯಾಗಿದೆ. ರಾಜ್ಯ ಸರ್ಕಾರವು ನಿಗದಿತ ಪಿಂಚಣಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು ಅಂಗನವಾಡಿ ನೌಕರರಿಗೆ ಹಾಗೂ ಸಿಬ್ಬಂದಿಗೆ ಕೆಲಸಕ್ಕೆ ತಕ್ಕಂತೆ ವೇತನದ ಜೊತೆಗೆ ನಿವೃತ್ತಿ ನಂತರದ ಪಿಂಚಣಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘವು ಸಾಕಷ್ಟು ಬಾರಿ ಸಂಬAಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿದೆ. ಅಂಗನವಾಡಿ ನೌಕರರಿಗೆ ಪ್ರತಿ ತಿಂಗಳು ಗೌರವ ಧನ, ಮೊಟ್ಟೆ, ಗ್ಯಾಸ್, ಬಾಡಿಗೆ ಹಣ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಬೇಕು ಮುಂಬಡ್ತಿ, ವರ್ಗಾವಣೆಗಳಲ್ಲಿ ರಾಜಕೀಯ ಮಾಡದೇ ನ್ಯಾಯಯುತವಾಗಿ ಆದೇಶ ನೀಡಬೇಕು ಗ್ರಾಚೂಟಿ ಜಾರಿಯಾಗಬೇಕು. ನಿವೃತ್ತಿಯಾದವರಿಗೆ ತಕ್ಷಣ ನಿವೃತ್ತಿ ಹಣ ಬಿಡುಗಡೆ ಮಾಡಬೇಕು. ಸುಮಾರು ವರ್ಷಗಳಿಂದ ಬಾಕಿ ಉಳಿದ ನಿವೃತ್ತಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಎಂ.ವಿಜಯಕೃಷ್ಣ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಅಂಜಲಮ್ಮ, ಪ್ರಧಾನ ಕಾರ್ಯದರ್ಶಿ ಎನ್ ಕಲ್ಪನಾ, ಉಪಾಧ್ಯಕ್ಷರಾದ ಶಿಳ್ಳಂಗೆರೆ ರಾಜಮ್ಮ, ಜಯಲಕ್ಷ್ಮಿ, ಲೋಕೇಶ್ವರಿ, ವೆಂಕಟಲಕ್ಷ್ಮೀ, ಲಕ್ಷ್ಮೀದೇವಿ, ಸಹ ಕಾರ್ಯದರ್ಶಿ ಗಾಂಧಿನಗರ ಮಂಜುಳ, ಮುಖಂಡರಾದ ಪುಷ್ಪ, ಮಮತಾ ಮುಂತಾದವರು ಇದ್ದರು
ಚಿತ್ರ ೨೭ ಕೆ.ಎಲ್.ಆರ್.೦೨ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂಗೊಳಿಸುವ ಜೊತೆಗೆ ಮೊಟ್ಟೆ, ಗ್ಯಾಸ್, ಬಾಡಿಗೆ ಹಣವನ್ನು ನಿಗದಿತ ಸಮಯಕ್ಕೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘವು ಪ್ರತಿಭಟನೆ ನಡೆಸಲು ತೀರ್ಮಾನಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾರ್ಮಿಕ ಮುಖಂಡರಾದ ಎಂ.ವಿಜಯಕೃಷ್ಣ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಅಂಜಲಮ್ಮ ಮುಂತಾದವರಿದ್ದರು.