ನ್ಯೂಸ್

ನಿಖಿಲ್ ಕುಮಾರಸ್ವಾಮಿ ಜಿಲ್ಲಾ ಪ್ರವಾಸಕ್ಕೆ ಮೊದಲೇ ಜೆಡಿಎಸ್ ಪಕ್ಷದಲ್ಲಿ ಗುಂಪುಗಾರಿಕೆಯ ಹೊಗೆ / ಜಿಲ್ಲಾಧ್ಯಕ್ಷರ ವಿರುದ್ದ ಹೈಕಮಾಂಡ್‌ಗೆ ಶ್ರೀನಿವಾಸಪುರ ಕಾರ್ಯಕರ್ತರಿಂದ ದೂರು.

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಲಿಷ್ಠವಾಗಿದ್ದು, ಈ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆಯಿAದ ಸೊರಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ಇನ್ನಷ್ಟು ಸದೃಢವಾಗಬೇಕಿದ್ದ ಜೆಡಿಎಸ್ ಪಕ್ಷದಲ್ಲಿಯೂ ಗುಂಪುಗಾರಿಕೆಯ ಹೊಗೆಯಾಡುತ್ತಿದ್ದು, ಜೆಡಿಎಸ್ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಲ್ಲಾ ಪ್ರವಾಸಕ್ಕೆ ಮೊದಲೇ ಜೆಡಿಎಸ್ ಪಕ್ಷದ ಗುಂಪುಗಾರಿಕೆ ಬಹಿರಂಗಗೊAಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಹಾಗು ಒಬ್ಬರು ಸಂಸದರಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿಯವರು ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿ ಕಟ್ಟಬೇಕಿದ್ದ ಜಿಲ್ಲಾಧ್ಯಕ್ಷರು ಕೇವಲ ಶ್ರೀನಿವಾಸಪುರ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದಾರೆ. ಜೆಡಿಎಸ್ ಪಕ್ಷದ ಸಂಸದರಾಗಿರುವ ಮಲ್ಲೇಶ್ ಬಾಬು ರವರು ಕೇವಲ ಬಂಗಾರಪೇಟೆ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದಾರೆ. ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಅವರು ಅವರ ತಾಲ್ಲೂಕಿನಲ್ಲಿ ಪಕ್ಷ ಕಟ್ಟಿಕೊಳ್ಳುತ್ತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸೋತ ಸಿ.ಎಂ.ಆರ್ ಶ್ರೀನಾಥ್ ತನ್ನ ಕಾರ್ಯಕರ್ತರನ್ನು ಬಿಟ್ಟುಕೊಡದಿದ್ದರೂ ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ತನ್ನ ಕಾರ್ಯಕರ್ತರನ್ನು ಕೈ ಬಿಡದೇ ಹಿಡಿದಿಟ್ಟಿಕೊಂಡಿದ್ದಾರೆ.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಲ್ಲಾ ಪ್ರವಾಸ ಕೋಲಾರ, ಬಂಗಾರಪೇಟೆ ಮತ್ತು ಶ್ರೀನಿವಾಸಪುರ ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗಿದ್ದರೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗದೆ ನಿಖಿಲ್ ರವರು ಕೋಲಾರ ಜಿಲ್ಲೆಗೆ ಬಂದರೂ ಮುಳಬಾಗಿಲು ತಾಲ್ಲೂಕಿಗೆ ಮಾತ್ರ ಆಹ್ವಾನವಿಲ್ಲದಾಗಿದೆ. ಇನ್ನು ಇವೆಲ್ಲದರ ಮಧ್ಯೆ ಕೆ.ಜಿ.ಎಫ್ ಮತ್ತು ಮಾಲೂರು ಕ್ಷೇತ್ರಗಳು ನಾವಿಕನಿಲ್ಲದ ದೋಣಿಯಂತೆ ಸೊರಗುತ್ತಿದೆ.

ನಿಖಿಲ್ ಜಿಲ್ಲಾ ಪ್ರವಾಸಕ್ಕೆ ಮೊದಲೇ ಜಿಲ್ಲಾಧ್ಯಕ್ಷರು ಹಾಗು ಶ್ರೀನಿವಾಸಪುರ ತಾಲ್ಲೂಕಿನ ಶಾಸಕರ ವಿರುದ್ದ ಜೆಡಿಎಸ್ ಹೈಕಮಾಂಡ್‌ಗೆ ಶ್ರೀನಿವಾಸಪುರ ತಾಲ್ಲೂಕಿನ ಕೆಲ ಕಾರ್ಯಕರ್ತರು ಭೇಟಿ ಮಾಡಿ ಶಾಸಕರ ವಿರುದ್ದ ದೂರು ನೀಡಿ ಬಂದಿದ್ದು, ಸರಿಪಡಿಸುವ ತನಕ ನಿಖಿಲ್ ಶ್ರೀನಿವಾಸಪುರ ಕಾರ್ಯಕ್ರಮಕ್ಕೂ ಬಾರದಂತೆ ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ಜು.೧೧ ರಂದು ಶ್ರೀನಿವಾಸಪುರದಲ್ಲಿ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದ ಆಯೋಜನೆಗಾಗಿ ಸೋಮವಾರ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಕಸಬಾ ಮತ್ತು ಶ್ರೀನಿವಾಸಪುರ ಪಟ್ಟಣದ ಜೆಡಿಎಸ್ ಮುಖಂಡರು ಗೈರುಹಾಜರಾಗಿದ್ದರು.

ಕೋಟ್:

ಕುಮಾರಸ್ವಾಮಿಯವರ ಬಳಿ ನನ್ನ ವಿರುದ್ದ ದೂರು ನೀಡಲು ಹೋದವರೆಲ್ಲಾ ನನ್ನ ಮಕ್ಕಳಿದ್ದಂತೆ ಅವರು ವಿಧಾನಸಭ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ್ದಾರೆ, ಸಣ್ಣ ಪುಟ್ಟ ವ್ಯತ್ಯಾಸಗಳಾಗಿ ಅವರಿಗೆ ಮನಸ್ಥಾಪವಾಗಿರಬಹುದು ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಎಲ್ಲರು ನಿಖಿಲ್‌ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶ್ರೀನಿವಾಸಪುರದಲ್ಲಿ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.

-ಜಿ.ಕೆ ವೆಂಕಟಶಿವಾರೆಡ್ಡಿ, ಶ್ರೀನಿವಾಸಪುರ ಶಾಸಕರು ಹಾಗು ಜೆಡಿಎಸ್ ಜಿಲ್ಲಾಧ್ಯಕ್ಷರು.

ಚಿತ್ರ ೦೮ ಕೆ.ಎಲ್.ಆರ್. ೦೧ : ಜಿ.ಕೆ.ವೆಂಕಟಶಿವಾರೆಡ್ಡಿ ರವರ ಭಾವಚಿತ್ರ

ಚಿತ್ರ ೦೮ ಕೆ.ಎಲ್.ಆರ್. ೦೧ಎ : ಜೆಡಿಎಸ್ ಚಿಹ್ನೆ