ನ್ಯೂಸ್

ಐಕ್ಯತಾ ಯಾತ್ರೆಯಲ್ಲಿ "ಕಪ್ಪು ಬಾವುಟ ಚಲೋ" ಎದುರಿಸಬೇಕಾಗುತ್ತೆ...

ಚಾಮರಾಜನಗರ: ನಾವು ಮನಸ್ಸು ಮಾಡಿದರೆ ಸೆ.30ರಂದು ಗುಂಡ್ಲುಪೇಟೆಯಿಂದ ಆರಂಭವಾಗುವ ಐಕ್ಯತಾ ಯಾತ್ರೆ ಬೆಳಗಾವಿ ತಲುಪುವವರೆಗೂ ಕಾಂಗ್ರೆಸ್ ಕಪ್ಪು ಬಾವುಟ ಚಲೋ ಎದುರಿಸಬೇಕಾಗುತ್ತದೆ ಎಂದು ನಗರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಶಿವರಾಜನಾಯಕ ಎಚ್ಚರಿಕೆ ನೀಡಿದರು.

ಮಂಗಳವಾರ ನಡೆದ‌ ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವ ವಿ.ಸೋಮಣ್ಣಗೆ ಕಪ್ಪು ಬಾವುಟ ಪ್ರದರ್ಶಿಸಿದ ನಗರಸಭೆ ಕಾಂಗ್ರೆಸ್ ಸದಸ್ಯ ‌ಆರ್.ಪಿ.ನಂಜುಂಡಸ್ವಾಮಿ ವಿರುದ್ಧ ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ಅವರು, ಈ‌ ಕೃತ್ಯ ನಡೆಯಲು ಪೊಲೀಸರ ಭದ್ರತಾ ವೈಫಲ್ಯವೇ ಕಾರಣ ಎಂದು ನೇರ ಆರೋಪ‌ ಮಾಡಿದರು.

ನಗರಸಭೆ ಸದಸ್ಯ ಆರ್.ಪಿ. ನಂಜುಂಡಸ್ವಾಮಿ‌ ಸೋಮವಾರ ಸುದ್ದಿಗೋಷ್ಠಿ ನಡೆಸಿ, ದಸರಾ ಮಹೋತ್ಸವದ ಲೈಟಿಂಗ್ಸ್‌ಗಾಗಿ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಆದರೆ ಉತ್ತಮ ಕೆಲಸ ಆಗಿಲ್ಲ. ಈ ಸಂಬಂಧ ಸಚಿವರಿಗೆ ವೇದಿಕೆಯಲ್ಲೇ ಧಿಕ್ಕಾರ ಕೂಗುತ್ತೇನೆ ಎಂದು ಹೇಳಿದ್ದರು. ಈ ವಿಚಾರ ಪೊಲೀಸರಿಗೆ ಮೊದಲೇ ಗೊತ್ತಿದ್ದರೂ ಪರಿಸ್ಥಿತಿ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದರು‌.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಗುಂಡ್ಲುಪೇಟೆಗೆ ಬರುವ ವೇಳೆ ನಾವುಗಳು ಮನಸ್ಸು ಮಾಡಿ ಕಪ್ಪು ಬಾವುಟ ಹಿಡಿಯಲು ಬಿಸಿ ಮುಟ್ಟಿಸುತ್ತೇವೆ. ನಾವು, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ವಿ.ಸೋಮಣ್ಣ ಅಭಿಮಾನಿಗಳು ಹೋರಾಟಕ್ಕಿಳಿಸದರೆ ಕಾಂಗ್ರೆಸ್ ಮುಖಂಡರು ಮನೆಯಿಂದ ಹೊರ ಬರಲು ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ರಾಜು ಮಾತನಾಡಿ, ಸಚಿವರು, ಶಾಸಕರು ಸೇರಿದಂತೆ ಸಾವಿರಾರು ಜನರು ಜಮಾಯಿಸಿದ್ದ ಕಾರ್ಯಕ್ರಮದಲ್ಲಿ
ಆರ್.ಪಿ.ನಂಜುಂಡಸ್ವಾಮಿ ಒಬ್ಬ ಜನಪ್ರತಿನಿಧಿಯಾಗಿ ತನ್ನ ಜವಾಬ್ದಾರಿ ಮರೆತು ಈ ರೀತಿ ವರ್ತಿಸಿರುವುದು ಖಂಡನೀಯ. ನಂಜುಂಡಸ್ವಾಮಿಯನ್ನು ವೇದಿಕೆಯಲ್ಲಿ ಕೂರಿಸಲು ಕಾರಣವೇನು? ನನಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಎಪಿಎಂಸಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಮನೋಜ್ ಪಟೇಲ್, ಪಾಲಿಕೆ ಸದಸ್ಯ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಶಿವು, ಯುವ ಮೋರ್ಚಾದ‌ ಸಿ.ಬಿ. ಸೂರ್ಯಕುಮಾರ್, ಮಂಡಲ ಅಧ್ಯಕ್ಷ ಆನಂದ್ ಭಗೀರಥ ಇದ್ದರು.